ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ, ಜು. ೧೮- ಮುಂಗಾರು ಸಂಸತ್ ಅಧಿವೇಶನದ ಮೊದಲ ದಿನವಾದ ಇಂದು ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯರು ಮತದಾನ ಮಾಡಲು ಅನುಕೂಲ ಕಲ್ಪಿಸಿ ಲೋಕಸಭೆ ಕಲಾಪವನ್ನು ನಾಳೆ ಬೆಳಿಗ್ಗೆ ೧೧ ಗಂಟೆಗೆ ಮುಂದೂಡಲಾಯಿತು. ಇದೇ ವೇಳೆ ರಾಜ್ಯಸಭೆಯಲ್ಲಿ ಅಗತ್ಯ ವಸ್ತುಗಳ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಿದ್ದರಿಂದ ಮೊದಲ ದಿನದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಮೊದಲ ದಿನವೇ ರಾಜ್ಯಸಭೆಯ ಕಲಾಪ ಗದ್ದಲದ ಗೂಡಾಯಿತು. ಅಗತ್ಯ ವಸ್ತುಗಳ ಬೆಲೆಯೇರಿಕೆ ಜಿಎಸ್‌ಟಿ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು.
ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ಸಭಾಪತಿ ವೆಂಕಯ್ಯನಾಯ್ಡು, ಕೆಲವು ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸುವ ಸಲುವಾಗಿಯೇ ಬಂದಿದ್ದಾರೆ. ಎಲ್ಲರೂ ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾಯಿಸಿ ಎಂದು ಹೇಳಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡುವುದಾಗಿ ಪ್ರಕಟಿಸಿದರು.
ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದಾಗ ಇತ್ತೀಚೆಗೆ ಹಂತಕನ ಗುಂಡಿಗೆ ಬಲಿಯಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಮತ್ತಿತರರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಬಳಿಕ ನಿಯಮ ೨೬೭ ಅಡಿಯಲ್ಲಿ ಕಾಂಗ್ರೆಸ್ ಸದಸ್ಯ ದೀಪೇಂದ್ರ ಹೂಡಾ, ಅಗ್ನಿಪಥ್ ಯೋಜನೆ ಕುರಿತು ಚರ್ಚೆಗೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮೊತ್ತೋರ್ವ ಕಾಂಗ್ರೆಸ್ ಸದಸ್ಯ ಶಕ್ತಿಸಿನ್ಹಾ ಗೋಯೆಲ್ ತಕ್ಷಣ ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಲೋಕಸಭೆಯಲ್ಲೂ ಎಲ್‌ಪಿಜಿ ಸಿಲಿಂಡರ್ ದರ ಇಳಿಸಬೇಕು. ಸರ್ಕಾರಿ ಯೋಜನೆಗಳ ಫಲಾಭವಿಗಳಿಗೆ ಸಬ್ಸಿಡಿ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಲೋಕಸಭೆಯಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರ ಸಂತಾಪ ಸಲ್ಲಿಸಲಾಯಿತು. ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕಲಾಪವನ್ನು ಮಧ್ಯಾಹ್ನದವರೆಗೂ ಮುಂದೂಡಲಾಯಿತು.