ಸಂಸತ್ ಅಧಿವೇಶನ;ನ. 28 ಸರ್ವಪಕ್ಷಗಳ ನಾಯಕರ ಜತೆ ಮೋದಿ ಚರ್ಚೆ

ನವದೆಹಲಿ,ನ.೨೩- ಸಂಸತ್ತಿನ ಚಳಿಗಾಲದ ಅಧಿವೇಶನ ನ. ೨೯ ರಿಂದ ಆರಂಭವಾಗಲಿದ್ದು ಇದೇ ೨೮ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ನವೆಂಬರ್ ೨೯ ರಿಂದ ಡಿಸೆಂಬರ್ ೨೩ ತನಕ ನಾಲ್ಕು ವಾರಗಳ ಕಾಲ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು ಸುಗಮ ಕಲಾಪ ನಡೆಯಲು ಸಹಕಾರ ನೀಡುವಂತೆ ಸರ್ವ ಪಕ್ಷಗಳ ನಾಯಕರಿಗೆ ಮೋದಿ ಮನವಿ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ೧೧ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ ಅಂದು ೩ಗಂಟೆಗೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಸದೀಯ ಮಂಡಳಿ ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರು ಅನುಸರಿಸಬೇಕಾದ ನಡೆಗಳ ಕುರಿತು ಚರ್ಚೆ ಆಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ವಿವರ ನೀಡುವ ಸಾಧ್ಯತೆಗಳಿವೆ.
ಉಭಯ ಪೀಠಾಧ್ಯಕ್ಷರ ಸಭೆ
ಸಂಸತ್ತಿನ ಉಭಯ ಕಲಾಪಗಳು ಸುಗಮವಾಗಿ ನಡೆಯಬೇಕು ಎನ್ನುವ ಹಿನ್ನೆಲೆಯಲ್ಲಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಮತ್ತು ರಾಜ್ಯಸಭೆ ಸಭಾಪತಿ ಎನ್ ವೆಂಕಯ್ಯ ನಾಯ್ಡು ಅವರು ಪ್ರತ್ಯೇಕವಾಗಿ ಉಭಯ ಸದನಗಳ ನಾಯಕರು ಸೇರಿದಂತೆ ರಾಜಕೀಯ ಪಕ್ಷಗಳ ಸಭೆ ಕರೆದಿದ್ದಾರೆ.
ಈ ಸಭೆಯಲ್ಲಿ ಸುಗಮ ಕಲಾಪ ನಡೆಸಲು ಸದಸ್ಯರ ಸಹಕಾರ ಮತ್ತು ಪದೇಪದೇ ಸಭಾತ್ಯಾಗ ಗಲಾಟೆ ಗದ್ದಲ ಅವಕಾಶ ಮಾಡಿಕೊಡದೆ ಸುಗಮ ಕಲಾಪ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಶಿಮ್ಲಾದಲ್ಲಿ ನಡೆದ ೮೨ನೇ ಅಖಿಲ ಭಾರತ ಪೀಠಸೀನಾಧಿಕಾರಿಗಳ ಸಭೆಯಲ್ಲಿ ಸುಗಮ ಕಲಾಪ ನಡೆಸುವ ಸಂಬಂಧ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಿದ್ದು ಈ ಬಾರಿಯ ಅಧಿವೇಶನದಲ್ಲಿ ಮಾಡಲು ನಿರ್ಧರಿಸಲಾಗಿದೆ.