
ಹುಬ್ಬಳ್ಳಿ, ಸೆ7: ಸಂಸತ್ ಅಧಿವೇಶನದ ಕುರಿತು ಅನಗತ್ಯ ಪುಕಾರು ಎಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಕರೆಯುವ ಮೊದಲು ವಿಪಕ್ಷಗಳನ್ನು ಕೇಳುವ ಪದ್ಧತಿಯಿಲ್ಲ, ಆದರೆ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದೆ ಎಂದು ಕುಟುಕಿದರು.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅಧಿವೇಶನ ಕರೆಯುವ ಸ್ವಾತಂತ್ರ್ಯವಿದೆ ಎಂದ ಅವರು, ಸೂಕ್ತವಾದ ಸಮಯದಲ್ಲಿ ಅಧಿವೇಶನದ ಅಜೆಂಡಾ ತಿಳಿಯಲಿದೆ ಎಂದು ನುಡಿದರು.
ಇಂಡಿಯಾ-ಭಾರತ್ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಈ ಬಗ್ಗೆ ಕೇಂದ್ರ ಸರ್ಕಾರದ ವಕ್ತಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ, ಭಾರತ ಎನ್ನುವವರು ಭಾರತ ಎನ್ನಲಿ, ಇಂಡಿಯಾ ಎನ್ನುವವರು ಇಂಡಿಯಾ ಎನ್ನಲಿ ಎಂದು ಸಚಿವರು ಹೇಳಿದರು.
ಹಿಂದೂ ಸನಾತನ ಧರ್ಮ ಎನ್ನುವುದು ನಿತ್ಯ ನೂತನ, ಅದರ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಇದುವರೆಗೂ ಕಾಂಗ್ರೆಸ್ ಅದನ್ನು ಖಂಡಿಸಿಲ್ಲ, ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ, ರಾಹುಲ್ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಡಿ.ಕೆ. ಶಿವಕುಮಾರ್ ದೇವಸ್ಥಾನಕ್ಕೆ ಹೋಗುತ್ತಾರೆ, ಅವರ ನಿಲುವೇನು? ಡಿ.ಎಂ.ಕೆ. ಹೇಳಿಕೆ ಖಂಡಿಸಲು ನಿಮಗೆ ಶಕ್ತಿಯಿಲ್ಲವೇ? ಎಂದು ಪ್ರಶ್ನಿಸಿದ ಅವರು, ಅಧಿಕಾರಕ್ಕೆ ಬರಲು ಕಾಂಗ್ರೆಸ್ ತುಷ್ಟೀಕರಣ ರಾಜಕೀಯದ ಔನ್ನತ್ಯ ತಲುಪಿದೆ ಎಂದು ವ್ಯಂಗ್ಯವಾಡಿದರು.
ಈದ್ಗಾ ಮೈದಾನ:
ಹುಬ್ಬಳ್ಳಿಯ ಈದ್ಗಾ ಮೈದಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ, ಮೈದಾನ ಪಾಲಿಕೆ ಆಸ್ತಿ ಎಂದ ಅವರು ಅಲ್ಲಿ ಗಣೇಶ ಮೂರ್ತಿ ಇಡಲು ಪಾಲಿಕೆ ಅನುಮತಿ ಬೇಕು, ಕಳೆದ ವರ್ಷ ನ್ಯಾಯಾಲಯದ ಆದೇಶದಂತೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.