ಸಂಸತ್‌ನಲ್ಲಿ ಕೋಲಾಹಲ ಕಲಾಪಕ್ಕೆ ಅಡ್ಡಿ

ನವದೆಹಲಿ,ಜು.೩೧- ಮಣಿಪುರ ಹಿಂಸಾಚಾರ ಪ್ರಕರಣದ ಸಂಸತ್ತಿನ ಉಭಯ ಸದನಗಳಲ್ಲಿ ಇಂದೂ ಕೂಡ ಮಾರ್ದನಿಸಿದ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ಮಾತಿನ ಚಕಮಕಿ ಗದ್ದಲ, ಗಲಾಟೆ ಕೋಲಾಹಲದಿಂದ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯುಂಟಾಗಿದೆ.
ಬೆಳಗ್ಗೆ ಲೋಕಸಭೆ ಮತ್ತು ರಾಜ್ಯ ಸಭೆಯ ಕಲಾಪಗಳು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷ “ಇಂಡಿಯಾ” ಸದಸ್ಯರು ತಮ್ಮ ತಮ್ಮ ಬೇಡಿಕೆ ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಧರಣಿ ಗದಲ್ಲ ನಡೆಸಿದ ಹಿನ್ನೆಲೆಯಲ್ಲಿ ಉಭಯ ಸದನಗಳು ಮಧ್ಯಾಹ್ನ ೨ಕ್ಕೆ ಮುಂದೂಡಲಾಯಿತು.
ಜು.೨೦ ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಇಂಡಿಯಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ಸದನಗಳಲ್ಲಿ ಹೇಳಿಕೆ ನೀಡುವಂತೆ ಆಗ್ರಹಿಸಿ ಧರಣಿ, ಹೋರಾಟ ನಡೆಸುತ್ತಿವೆ.
ಪ್ರತಿಪಕ್ಷಗಳ ಬೇಡಿಕೆಗೆ ಆಡಳಿತ ಪಕ್ಷ ಸೊಪ್ಪು ಹಾಕದ ಹಿನ್ನೆಲೆಯಲ್ಲಿ “ನಾ ಕೊಡೆ ನೀ ಬಿಡೆ “ ಎನ್ನುವಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದಲ್ಲ ಸೃಷ್ಟಿಯಾಗಿ ಕಲಾಪ ಪ್ರತಿದಿನವೂ ವ್ಯರ್ಥವಾಗುತ್ತಿದೆ.ದೆಹಲಿ ಸೇವೆಗಳ ಮಸೂದೆ ಮಂಡಿಸಲು ಆಡಳಿತ ಪಕ್ಷ ಸಿದ್ದತೆ ನಡೆಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಇಂಡಿಯಾ ಸದಸ್ಯರು, ಪ್ರಧಾನಿ ವಿರುದ್ದ ಅವಿಶ್ವಾಸ ಮಂಡನೆಯ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಬಿಗಿಪಟ್ಟು ಹಿಡಿದು ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ನಡೆದು ಇಂದು ಕಲಾಪ ನಡೆಯದಂತಾಯಿತು.
ಮಣಿಪುರದಲ್ಲಿ ಮೇ ಮೊದಲ ವಾರದಿಂದ ಜನಾಂಗೀಯ ಘರ್ಷಣೆಗೆ ಸಾಕ್ಷಿಯಾಗಿದೆ. ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಹೇಳುವ ಮೇಲೆ ನರೇಂದ್ರ ಮೋದಿ ಸರ್ಕಾರ ಅವಿಶ್ವಾಸ ನಿರ್ಣಣ ಮಂಡಿಸಿವೆ.
ಲೋಕಸಭೆಯಲ್ಲಿ ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಸುಗ್ರೀವಾಜ್ಞೆ ಬದಲಿಸುವ ಮಸೂದೆ ಇಂದಿನ ವ್ಯವಹಾರದಲ್ಲಿ ಪಟ್ಟಿ ಮಾಡಲಾಗಿಲ್ಲ ಮತ್ತು ಈ ವಿಷಯವನ್ನು ಸಂಸತ್ತಿನಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಆದರೂ ಪ್ರತಿಪಕ್ಷಗಳು ಗದ್ದಲ ಸೃಷ್ಠಿಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡಿದರು.
ರಾಜ್ಯಸಭೆಯಲ್ಲಿಯೂ ಗದ್ದಲ:
ಇನ್ನೂ ರಾಜ್ಯಸಭೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದರಿಂದ ಕಲಾಪವನ್ನು ಮೊದಲು ೧೨ ಗಂಟೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಸಮಾವೇಶಗೊಂಡಾಗಲೂ ಪ್ರತಿಪಕ್ಷಗಳು ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿದರು.
ಸಭಾನಾಯಕ ಪಿಯೂಷ್ ಗೋಯಲ್ ಪ್ರತಿಕ್ರಿಯೆ ನೀಡಿ “ಪ್ರತಿಪಕ್ಷಗಳು ಮಣಿಪುರದ ಚರ್ಚೆಗೆ ವಿರುದ್ಧವಾಗಿವೆ. ಒಂಬತ್ತು ದಿನಗಳಿಂದ, ಮಣಿಪುರದ ಬಗ್ಗೆ ಮಾತನಾಡುವ ಭರವಸೆ ಸರ್ಕಾರ ಉಳಿಸಿಕೊಂಡಿದೆ ಆದರೆ ಪ್ರತಿಪಕ್ಷಗಳ ಕಡೆಯಿಂದ ಅದು ಸಾಧ್ಯವಾಗಲಿಲ್ಲ. ಅವರು ಸಿದ್ಧರಿದ್ದರೆ, ನಾವು ಮಧ್ಯಾಹ್ನ ೨ ಗಂಟೆಗೆ ಚರ್ಚೆ ನಡೆಸಲು ಸಿದ್ದ ಎಂದರು.
ಈ ಹಂತದದಲ್ಲಿ ಆಡಳಿತ ಮತ್ತು ಪ್ರತಿಕಪಕ್ಷಗಳ ಸದಸ್ಯರ ವಿರುದ್ದ ಗದ್ದಲ ನಡೆದು ಕಲಾಪವನ್ನು ಮಧ್ಯಾಹ್ನಕ್ಕೆ ಸಭಾಪತಿ ಜಗದೀಪ್ ಧನಕರ್ ಮುಂದೂಡಿದರು.