ಸಂಸತ್ತಿನ ಆವರಣದಲ್ಲಿ ಧರಣಿ, ಮುಷ್ಕರ ನಿಷೇಧ: ಎಸ್.ಯು.ಸಿ.ಐ (ಸಿ) ಖಂಡನೆ

ಕಲಬುರಗಿ,ಜು.18-ಸಂಸತ್ತಿನ ಆವರಣದಲ್ಲಿ ಧರಣಿ ಮತ್ತು ಮುಷ್ಕರಗಳ ನಿಷೇಧವನ್ನು ಎಸ್.ಯು.ಸಿ.ಐ.(ಸಿ) ಜಿಲ್ಲಾ ಕಾರ್ಯದರ್ಶಿ ಹೆಚ್.ವ್ಹಿ.ದಿವಾಕರ್ ಅವರು ಅತ್ಯಂತ ಉಗ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ಪ್ರಜಾಸತ್ತಾತ್ಮಕ ಹಕ್ಕು ಹಾಗೂ ನಿಯಮಗಳನ್ನು ಮತ್ತಷ್ಟು ಮೊಟಕುಗೊಳಿಸುವ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿರೋಧ ಮತ್ತು ಹೋರಾಟಗಳನ್ನು ಪ್ರತಿಪಾದಿಸುತ್ತಿದ್ದ ಬಹಳಷ್ಟು ಸಾಮಾನ್ಯ ಪದಗಳು ಹಾಗೂ ವಾಕ್ಯಗಳ ಬಳಕೆ ಇನ್ನು ಮುಂದೆ ಅಸಂಸದೀಯವಾಗುತ್ತದೆ ಎಂದು ಪ್ರಕಟಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು, ತನ್ನ ಫ್ಯಾಸಿಸ್ಟ್ ನಿರಂಕುಶಾಧಿಕಾರದ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಂತಹ ಪದಗಳು ಅಥವಾ ವಾಕ್ಯಗಳನ್ನು ಬಳಸಿದ್ದೇ ಆದರೆ, ಅವರನ್ನು ಕಲಾಪಗಳಿಂದ ಹೊರಹಾಕಬಹುದು ಮಾತ್ರವಲ್ಲದೆ ದಂಡವನ್ನು ಸಹ ವಿಧಿಸಬಹುದು. ಇದರೊಂದಿಗೆ, ಎರಡೂ ಸದನಗಳ ಸದಸ್ಯರುಗಳು ಸಂಸತ್ತಿನ ಆವರಣವನ್ನು’ ಪ್ರತಿಭಟನಾ ಪ್ರದರ್ಶನ, ಧರಣಿ, ಮುಷ್ಕರ ಅಥವಾ ಉಪವಾಸ ಸತ್ಯಾಗ್ರಹ’ಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಆಳುವ ಏಕಸ್ವಾಮ್ಯ ಬಂಡವಾಳಶಾಹಿ ವರ್ಗದ ಹಿತಾಸಕ್ತಿಯನ್ನು ಕಾಪಾಡಲು ಅಧೀನವಾಗಿರುವ ಬಿಜೆಪಿ ಸರ್ಕಾರವು, ವಾಸ್ತವದಲ್ಲಿ, ಸಂಸದೀಯ ಪ್ರಜಾಪ್ರಭುತ್ವದ ಸಣ್ಣ ಅಂಶಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಅಂಶಗಳನ್ನು ಹೊಸಕಿಹಾಕುತ್ತಿದೆ. ಆದರೆ, ಪ್ರಪಂಚದ ಎದುರಿಗೆ ಮಾತ್ರ ಭಾರತೀಯ ಪ್ರಜಾಪ್ರಭುತ್ವವು ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ಇಂತಹ ನಿರಂಕುಶ ಕ್ರಮಗಳು ಅತ್ಯಂತ ಖಂಡನೀಯ. ಇದರೊಂದಿಗೆ, ಅಲ್ಪ ಸ್ವಲ್ಪ ಉಳಿದಿರುವ ಪ್ರಜಾಸತ್ತಾತ್ಮಕ ರೂಢಿ ಮತ್ತು ಆಚರಣೆಗಳನ್ನು ವ್ಯವಸ್ಥಿತವಾಗಿ ಮೊಟಕುಗೊಳಿಸುವುದನ್ನು ತಡೆಗಟ್ಟಲು ಪ್ರಬಲವಾದ ಚಳುವಳಿಯನ್ನು ಕಟ್ಟಲು ಪ್ರಜಾಸತ್ತಾತ್ಮಕ ಮನಸ್ಸುಳ್ಳ ಎಲ್ಲ ಜನತೆ ಸಂಘಟಿತರಾಗಬೇಕು ಎಂದು ಕರೆ ನೀಡಿದ್ದಾರೆ.