ಸಂಸತ್ತಿನಲ್ಲಿ ಸೋನಿಯಾಗಾಂಧಿ ವಿರುದ್ಧ ವಾಗ್ದಾಳಿ: ಸಚಿವೆ ಸ್ಮøತಿ ಇರಾನಿ ಪ್ರತಿಕೃತಿ ದಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ,ಜು.29: ಸಂಸತ್ತಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸೋನಿಯಗಾಂಧಿ ಅವರ ವಿರುದ್ಧ ವಾಗ್ದಾಳಿ ಮಾಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದ ಸೇಡಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಕೇಂದ್ರ ಸಚಿವೆ ಶ್ರೀಮತಿ ಸ್ಮøತಿ ಇರಾನಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ಕೈಗಳಲ್ಲಿ ಕೇಂದ್ರ ಸಚಿವೆ ಶ್ರೀಮತಿ ಸ್ಮøತಿ ಇರಾನಿ ಅವರ ಪ್ರತಿಕೃತಿ ಹಿಡಿದು ಅವರ ವಿರುದ್ಧ ಘೋಷಣೆಗಳನ್ನು ಹಾಕಿದರು. ಕೆಲ ಕಾರ್ಯಕರ್ತರು ಭಾವಚಿತ್ರಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದರು. ಇನ್ನೂ ಕೆಲ ಕಾರ್ಯಕರ್ತರು ಪ್ರತಿಕೃತಿಗೆ ಬೆಂಕಿ ಹಚ್ಚಿ ಕೋಪ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಪಶ್ಚಿಮ್ ಬಂಗಾಳದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಗಳಿಗೆ ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದು ಸಂಸತ್ತಿನಲ್ಲಿ ಆಡಳಿತ ಪಕ್ಷದವರನ್ನು ಕೆರಳಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶ್ರೀಮತಿ ಸ್ಮøತಿ ಇರಾನಿ ಅವರು ಸದನದಲ್ಲಿದ್ದ ಎಐಸಿಸಿಐ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಅವರ ವಿರುದ್ಧ ಹರಿಹಾಯ್ದು, ಅವರು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಆದಾಗ್ಯೂ, ಅಧೀರ್ ರಂಜನ್ ಚೌಧರಿ ಅವರು ಕ್ಷಮೆ ಕೇಳಿದ್ದರು. ಆದಾಗ್ಯೂ, ಶ್ರೀಮತಿ ಸೋನಿಯಾಗಾಂಧಿ ಅವರ ವಿರುದ್ಧ ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರು ವಾಗ್ದಾಳಿ ನಡೆಸಿದ್ದು ಖಂಡನೀಯ ಎಂದು ಪ್ರತಿಭಟನೆಕಾರರು ಕಿಡಿಕಾರಿದರು.
ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ್ ಹೊನಗುಂಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಈರಣ್ಣ ಝಳಕಿ, ಶಕೀಲ್ ಸರಡಗಿ, ಪರಶುರಾಮ್ ನಾಟೀಕಾರ್, ಅಮರ್ ಶಿರವಾಳ್, ಕಾರ್ತಿಕ್ ನಾಟೀಕಾರ್, ಮಂಜುಳಾ ಪಾಟೀಲ್, ಶ್ವೇತಾ, ಗೀತಾ, ವಿಘ್ನೇಶ್ ಟೈಗರ್, ಅಪ್ಪಾರಾವ್, ಸುರೇಶ್, ಗಣೇಶ್ ನಾಗನಳ್ಳಿ, ಸಂಗು ಸನಪಾಲ್, ಅಭಿಷೇಕ್ ಮುಂತಾದವರು ಪಾಲ್ಗೊಂಡಿದ್ದರು.