ಸಂಸತ್ತಿಗೆ ಕಳಿಸಿ ಕಲಬುರಗಿಯ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ,ಏ.28- ತಾವೆಲ್ಲರು ನನಗೆ ಮತ ನೀಡಿ ಸಂಸತ್ತಿಗೆ ಕಳಿಸಿಕೊಟ್ಟಲ್ಲಿ ಕಲಬುರಗಿಯ ಧ್ವನಿಯಾಗಿ ಕೆಲಸ ಮಾಡುವುದಾಗಿ ಕಲಬುರಗಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಹೇಳಿದರು.
ನಗರದ ಖುಭಾ ಪ್ಲಾಟ್ ನಲ್ಲಿರುವ ನಿಲಕಂಠರಾವ ಮೂಲಗೆ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯವಷ್ಟೆ ಅಲ್ಲ ಇಡಿ ರಾಷ್ಟ್ರದ ಗಮನ ಸೆಳೆದಿರುವ ಈ ಮತಕ್ಷೇತ್ರದಿಂದ ತಮ್ಮನ್ನು ಆಯ್ಕೆ ಮಾಡುವ ಮೂಲಕ ಈ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶವನ್ನು ನೀಡುವಂತೆ ಮನವಿ ಮಾಡಿದರು.
ಕೇವಲ ರಾಜಕೀಯ ಭಾಷಣ ಕೇಳಿ ಮತ ಹಾಕುವ ಕಾಲ ಈಗಿಲ್ಲ, ಯಾವ ಪಕ್ಷಕ್ಕೆ ಮತ ನೀಡಿದರೆ ಕ್ಷೇತ್ರ ಹಾಗೂ ದೇಶದ ಭವಿಷ್ಯವಿದೆ ಎಂಬ ವಿಚಾರವನ್ನು ಮತದಾರರು ಪರಿಗಣಿಸುತ್ತಾರೆ, ಈ ಕ್ಷೇತ್ರದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮಾಡಿರುವ ಅಭಿವೃದ್ದಿ ಕೆಲಸಗನ್ನು ನೋಡಿ ಹಾಗೂ ಅವರ ಕನಸಿನ ಯೋಜನೆಗಳನ್ನು ಜಾರಿಗೆ ತರಲು ತಾವೇಲ್ಲರೂ ಬೆಂಬಲಿಸುವಂತೆ ಅವರು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ನೀಲಕಂಠ ರಾವ ಮೂಲಗೆ ಅವರು, ಮಾತನಾಡಿ, ಈ ಕ್ಷೇತ್ರದ ಅಪ್ಪಟ ಚಿನ್ನಗಳಾದ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ರಾಧಾಕೃಷ್ಣ ಅವರನ್ನು ಬೆಂಬಲಿಸಲು ಪಕ್ಷದ ಕಾರ್ಯಕರ್ತರು, ಮನೆಮನೆಗೆ ತೆರಳಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು, ಬಿಜೆಪಿಯ ಆಡಳಿತದಲ್ಲಿ ಆಗಿರುವ ಬೆಲೆ ಏರಿಕೆ ವಿಷಯವನ್ನು ಮತದಾರರ ಗಮನಕ್ಕೆ ತರಬೇಕು ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಿಗುವ ಲಾಭಗಳ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡಬೇಕು ಎಂದರು.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ರಾಘವೇಂದ್ರ ಮೈಲಾಪೂರೆ, ಮಲ್ಲಿನಾಥ ಪಾಟೀಲ ಸೋಂತ, ನಾರಾಯಣರಾವ ಕಾಳೆ, ರಾಜು ಭೀಮಳ್ಳಿ, ಡಾ.ವಿಕ್ರಮ ಸಿದ್ದಾರೆಡ್ಡಿ ಸೇರಿದಂತೆ ಪಕ್ಷದ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.