ಸಂಶೋಧನೆ, ಅಭಿವೃದ್ಧಿ ನಿರಂತರ ನಡೆಯಲಿ

ಬೆಂಗಳೂರು, ಏ. ೨೦- ಸಂಶೋಧನೆಯಲ್ಲಿ ತೊಡಗಿರುವಂತಹ ವ್ಯಕ್ತಿಗಳು ತಮ್ಮ ಸಂಶೋಧನೆಯ ಫಲಿತಾಂಶಗಳು ವಿಶ್ವಕ್ಕೆ ಮತ್ತು ಸಮಾಜಕ್ಕೆ ಯಾವುದೇ ರೀತಿಯ ಕೆಡುಕನ್ನುಂಟುಮಾಡದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಲಹೆ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯವು ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಐಸಿಎಇಸಿಐಎಸ್-೨೦೨೩ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಮಾನವನ ಕಲ್ಯಾಣಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಬೇಕು. ಆದರೆ, ಅವು ಜಗತ್ತಿನ ವಿನಾಶಕ್ಕೆ ಎಡೆಮಾಡಿ ಕೊಡಬಾರದು ಎಂದು ಅವರು ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಬೇಕು ಎಂದು ಸ್ವಾಮೀಜಿ ಅವರು ಒತ್ತಿ ಹೇಳಿದರು.
ನಮ್ಮ ಸಂಶೋಧನೆಗಳಿಂದ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆ ಮತ್ತು ಮಾರಕಾಸ್ತ್ರಗಳಿಂದ ವಿಶ್ವ ವಿನಾಶಹೊಂದಿದರೆ, ಆನಂತರ ಮತ್ತೆ ಜಾಗತಿಕ ಯುದ್ಧವೇನಾದರು ಸಂಭವಿಸಿದರೆ ನಾವು ಕಲ್ಲುಗಳು, ಹೆಂಟೆಗಳನ್ನು ಬಳಸಬೇಕಾದಂತಹ ಪರಿಸ್ಥಿತಿ ಒದಗಬಹುದು ಎಂದು ಅವರು ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರು, ಇಡೀ ಜಗತ್ತು ನಮ್ಮ ದೇಶದ ಪ್ರಗತಿಯನ್ನು ಗಮನಿಸುತ್ತದೆ. ಹಾಗಾಗಿ ಸಂಶೋಧನೆ ಮತ್ತು ಪ್ರಗತಿಯತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿರುವ ಮಾತುಗಳನ್ನು ಶ್ರೀಗಳು ಉಲ್ಲೇಖಿಸಿದರು.
ನವನವೀನ ತಾಂತ್ರಿಕತೆ, ನಿರಂತರ ಸಂಶೋಧನೆ ಮತ್ತು ಅಪ್‌ಗ್ರೇಡೇಷನ್ ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಜೀವಾಳ ಎಂದ ಶ್ರೀಗಳು, ಸಂಶೋಧಕರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಆ ರೀತಿ ಆಗಲು ಯಾವ ಕಾರಣಕ್ಕೂ ಅವಕಾಶ ಕೊಡಬಾರದು ಎಂದರು.
ನಮ್ಮ ಪೂರ್ವೀಕರು ಸುಮಾರು ೬ ಸಾವಿರ ವರ್ಷಗಳ ಹಿಂದೆಯೇ ಸಂಶೋಧನೆಯ ಬಗ್ಗೆ ಮಾಡಿದ ಹಲವು ಪ್ರಯತ್ನಗಳಿಂದ ನಾವು ಇಂತಹ ಪ್ರಗತಿ ಹೊಂದಿರುವ ಸಮಾಜದಲ್ಲಿ ಜೀವಿಸುತ್ತಾ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ ಎಂದು ಅವರು ನುಡಿದರು.
ಸಮ್ಮೇಳನದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್ ಅವರು, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ ಅವರು, ನಿರ್ದೇಶಕ ಜೆ,ರಾಜು ಅವರು, ಬಿಐಟಿ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಅವರು, ಬೆಂಗಳೂರು ಐಐಎಸ್‌ಸಿಯ ಪ್ರೊ. ತಲಬಟ್ಟುಲ ಶ್ರೀನಿವಾಸ್ ಅವರು, ಎನ್‌ಎಎಸ್‌ಐ ಹಿರಿಯ ವಿಜ್ಞಾನಿ ಎಲ್.ಎಂ. ಪಟ್ನಾಯಕ್ ಅವರು, ಇಸ್ರೋದ ರೂಪಾ ವೆಂಕಟೇಶ್ ಅವರು, ಹಾಂಕಾಂಗ್ ನ ಪ್ರೊ.ಬೆಂಜಮಿನ್ ವಾನ್ ಸಾಂಗ್ ವಾಹ್, ಸಿಂಗಾಪುರದ ಪ್ರೊ.ಜಿನ್ ಸಾಂಗ್ ಡಾಂಗ್ ಅವರು ಬಿಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶ್ವತ್ಥ್ ಎಂ.ಯು. ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ನಗರದ ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಐಸಿಎಇಸಿಐಎಸ್-೨೦೨೩” ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ, ಹಾಂಕಾಂಗ್‌ನ ಪ್ರೊ. ಬೆಂಜಮಿನ್‌ವಾನ್ ಸಾಂಗ್ ವಾಹ್ ಸಿಂಗಾಪುರದ ಪ್ರೊ. ಜಿನ್ ಸಾಂಗ್ ಡಾಂಗ್, ಪ್ರಾಂಶುಪಾಲ ಡಾ. ಅಶ್ವತ್ಥ್ ಎಂ.ಯು., ಮತ್ತಿತರರು ಉಪಸ್ಥಿತರಿದ್ದರು.