
ಕಲಬುರಗಿ:ಮಾ.17 : ವಿಶ್ವವಿದ್ಯಾಲಯಗಳು ಪ್ರಗತಿ ಹೊಂದಬೇಕಾದರೆ ಸಂಶೋಧನೆಗಳು ಅನಿವಾರ್ಯ ಹಾಗೂ ಅವಶ್ಯಕ. ಹೊಸ ಆವಿಷ್ಕಾರ, ಆಧುನಿಕ ತಂತ್ರಜ್ಞಾನಗಳ ತಿಳುವಳಿಕೆಗೆ ಸಂಶೋಧನೆಗಳೇ ಮಾರ್ಗ ಎಂದು ಕೆಬಿಎನ್ ವಿವಿಯ ಕುಲಸಚಿವೆ ಡಾ.ರುಕ್ಸರ್ ಫಾತಿಮಾ ನುಡಿದರು.
ಕೆಬಿಎನ್ ವಿವಿಯ ಗಣಿತ ಹಾಗೂ ಭೌತವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಕೆಬಿಎನ್ ನ ವೈದ್ಯಕೀಯ ನಿಕಾಯದ ಏನೋಟೊಮಿ ಆಡಿಟೋರಿಯಂನಲ್ಲಿ ಶುಕ್ರವಾರ ಆಯೋಜಿಸಿದ್ದ “ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಅನ್ವಯಿಕ ಗಣಿತದ ಕುರಿತು ರಾಜ್ಯ ಮಟ್ಟದ ಅಂತರ ಶಿಸ್ತಿನ ಸಂಶೋಧನಾ ಕಾರ್ಯಾಗಾರ” ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಗರದ ಕೆಬಿಎನ್ ವಿವಿಯು ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರಾಧ್ಯಾಪಕರು ಪಠ್ಯವನ್ನು ಪೂರ್ಣಗೊಳಿಸುವುದವರ ಜೊತೆಗೆ ವಿದ್ಯಾರ್ಥಿಗಳನ್ನು ಸಂಶೋಧನೆಯಲ್ಲಿ ತೊಡಗಿಸಬೇಕು. ಅಲ್ಲದೇ ಹೊಸ ಹೊಸ ವಿಷಯ ಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬೇಕು ಎಂದರು. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಮುಖ್ಯ ಭಾಷಣಕಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಡಾ. ದೀಪಕ ಸಾಮ್ಯೂಲ್ ಮಾತನಾಡುತ್ತ ಡೇಟಾ ವಿಜ್ಞಾನ ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ. ನಮ್ಮ ದಿನಚರಿಯಲ್ಲಿ ಡೇಟಾ ವಿಜ್ಞಾನ ಅನೇಕ ಅನುಕೂಲಗಳನ್ನು ಒದಗಿಸಿದೆ ಎಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದರು. ಬಾಹ್ಯಕಾಶ್ ವಿಜ್ಞಾನದ ಬಗ್ಗೆ ಕಾರ್ಯಾಗಾರ ಹಮ್ಮಿಕೊಂಡ ಕೆಬಿಎನ್ ವಿವಿಯನ್ನು ಅಭಿನಂದಿಸಿದರು. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿ ಅವರ ಜ್ಞಾನವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯ ಪಟ್ಟರು.
ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿವಿಯ ಕಲಾ, ಭಾಷಾ, ಮಾನವಿಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಡೀನ್ ಡಾ. ನಿಶಾತ ಆರೀಫ್ ಹುಸೇನಿ ಇವರು, ಬಾಹ್ಯಕಾಶದ ಆವಿಷ್ಕಾರಗಳಲ್ಲಿ ಡೇಟಾ ವಿಜ್ಞಾನ, ಗಣಿತ ಮತ್ತು ಖಗೋಳ ಭೌತ ಶಾಸ್ತ್ರಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ವಿಶ್ವವನ್ನು ಅರಿಯಲು ಜಾಗತಿಕ ಮಟ್ಟದಲ್ಲಿ ಬಾಹ್ಯಕಾಶ ಸಂಶೋಧನೆಗಳು ಜರಗುತ್ತಿವೆ. ರಾಜ್ಯ ಮಟ್ಟದ ಈ ಎರಡು ದಿನದ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಬಹು ಉಪಯೋಗಿ ಎಂದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಗಣಿತ ವಿಭಾಗದ ಪ್ರೊ. ಎಸ್ ಎನ್ ಹಸ್ಸನ್ ಇವರು “ಯೂನಿವರ್ಸ್ ‘ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಅದೇ ವಿವಿಯ ಭೌತ ವಿಜ್ಞಾನ ವಿಭಾಗದ ಪ್ರೊ. ಪ್ರಿಯಾ ಹಸ್ಸನ್ ಇವರು ವಿಶ್ವ ವೀಕ್ಷಣೆ ಮತ್ತು ಬಾಹಿರಗ್ರಹಗಳ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯಾರ್ಥಿನಿ ಜೊಹರಾ ಬೇಗಂ ಪ್ರಾರ್ಥಿಸಿದರು. ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಡಾ. ಸಯ್ಯದ್ ಅಬ್ರಾರ ಸ್ವಾಗತಿಸಿದರೆ, ಭೌತ ವಿಜ್ಞಾನ ವಿಭಾಗದ ಮುಖಸ್ಥೆ ಡಾ. ನಾಝಿಯಾ ಪರ್ವೀನ್ ಅತಿಥಿಗಳನ್ನ ಪರಿಚಯಿಸಿದರು. ಗಣಿತ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಸೀಮಾ ಜಬೀನ್ ಕಾರ್ಯಾಗಾರದ ಕುರಿತು ಮಾತನಾಡಿದರು. ಅದೇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸನಾ ಏಜಾಜ ವಂದಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಜಾವುದ್ದಿನ್ ಸಫಿ ನಿರೂಪಿಸಿದರು.
ಈ ಸಮಾರಂಭದಲ್ಲಿ ಕೆಬಿನ್ ಕಲಾ, ಭಾಷಾ, ಮಾನವಿಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.