ಸಂಜೆವಾಣಿ ನ್ಯೂಸ್
ಮೈಸೂರು: ಜು.20:- ಸಂಶೋಧನಾ ವಿದ್ಯಾರ್ಥಿಗಳು ಚಾಟ್ ಜಿಪಿಟಿ ಸೇರಿದಂತೆ ವಿವಿಧ ಕಡೆಗಳಿಂದ ಸಂಶೋಧನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ. ಆದರೆ, ಅಲ್ಲಿ ಪಡೆದ ಮಾಹಿತಿಯನ್ನೇ ಕಾಪಿ ಪೇಸ್ಟ್ ಮಾಡಬೇಡಿ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪೆÇ್ರ. ಹಸೀನ್ ತಾಜ್ ಸಂಶೋಧನಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಸಂಶೋಧನೆ ಮತ್ತು ಪ್ರಕಟಣಾ ನೀತಿಶಾಸ್ತ್ರ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಿಮ್ಮ ಸಂಶೋಧನೆಗೆ ತಂತ್ರಜ್ಞಾನ, ಪುಸ್ತಕಗಳ ನೆರವು ಪಡೆಯಿರಿ. ಆದರೆ, ಅಲ್ಲಿರುವ ಮಾಹಿತಿಯನ್ನೇ ಕಾಪಿ ಮಾಡುವುದು ಸರಿಯಾದ ಸಂಶೋಧನಾ ವಿಧಾನವಲ್ಲ. ಸಂಶೋಧಕರಿಗೆ ತಾವು ಸಂಶೋಧಿಸುವ ವಿಷಯದ ಕುರಿತು ಆಳವಾದ ಜ್ಞಾನ ಹಾಗೂ ಅಧ್ಯಯನ ಅವಶ್ಯಕ ಎಂದರು.
ಸಂಶೋಧನಾ ಪ್ರಬಂಧದಲ್ಲಿ ಯಾವುದೇ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕಾಗಿರುವುದು ಸಂಶೋಧನಾ ವಿದ್ಯಾರ್ಥಿ ಗಳ ಕರ್ತವ್ಯ. ಸಣ್ಣ ವ್ಯಾಕರಣದೋಷ ಸಹ ಕಂಡು ಬರಬಾರದು. ಕೆಲವೊಂದು ವೇಳೆ ಸಣ್ಣದೋಷಗಳು ಭಿನ್ನವಾದ ಅರ್ಥ ಹೊಂದಿರುತ್ತದೆ. ಹಾಗಾಗಿ ಸಂಶೋಧನಾ ಪ್ರಬಂಧವನ್ನು ಓದುವವರಿಗೆ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು.
ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪೆÇ್ರ. ತಳವಾರ್ ಮಾತನಾಡಿ, ಇತ್ತೀಚೆಗೆ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಬದ್ಧತೆ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಟಾಚಾರಕ್ಕೆ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಶೋಧನೆ ಕೈಗೊಳ್ಳುವ ವಿಷಯದ ಕುರಿತು ಸಂಶೋಧನಾ ವಿದ್ಯಾರ್ಥಿಗಳು ಆಳವಾದ ಅಧ್ಯಯನ ನಡೆಸಬೇಕು. ಸಂಶೋಧನೆ ಮುಗಿಯುವವರೆಗೆ ಸಂಶೋಧನಾ ವಿದ್ಯಾರ್ಥಿಗಳು ವಿಷಯದ ಕುರಿತು ಎಲ್ಲ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮುಕ್ತ ವಿವಿ ಕುಲಸಚಿವ ಪೆÇ್ರ.ಕೆ.ಎಲ್.ಎನ್. ಮೂರ್ತಿ, ಅಕಾಡೆಮಿಕ್ ಡೀನ್ ಪೆÇ್ರ.ಎನ್. ಲಕ್ಷ್ಮಿ ಇದ್ದರು.