ಸಂಶೋಧಕ ಗುರುಸಿದ್ದಯ್ಯರಿಂದ ವೀರಗಲ್ಲು ಪತ್ತೆ

ದೇವನಹಳ್ಳಿ.ನ೫:ತಾಲ್ಲೂಕಿನ ಕುಂದಾಣ ಹೋಬಳಿಯ ಇಲತೊರೆ ಗ್ರಾಮದ ಕೆರೆಯ ಏರಿಯ ಬಳಿ ಪ್ರಾಚೀನ ಕಾಲದ ವೀರಗಲ್ಲು ಪತ್ತೆಯಾಗಿದೆ, ಅನಾಥವಾಗಿ ಬಿದ್ದಿದ್ದ ಕಲ್ಲುಗಳನ್ನು ಗಮನಿಸಿದಾಗ ಅವು ವೀರಗಲ್ಲು ಎಂದು ಗೊತ್ತಾಗಿದೆ ಎಂದು ಸಂಶೋದಕರಾದ ಬಿಟ್ಟಸಂದ್ರ ಬಿ.ಜಿ. ಗುರುಸಿದ್ದಯ್ಯ ತಿಳಿಸಿದರು.
ಗುರುಸಿದ್ದಯ್ಯನವರು ಮೂಲತಹ ಶಿಕ್ಷಕರಾಗಿದ್ದು ನಿವೃತ್ತಿ ನಂತರ ಪ್ರಾಚೀನ ಕಾಲದ ಶಿಲಾಶಾಸನ ಹಾಗೂ ಪಳಯುಳಿಕೆಗಳನ್ನು ಪತ್ತೆ ಮಾಡುವ ಕ್ಷೇತ್ರ ಕಾರ್ಯದಲ್ಲಿ ನಿರತರಾಗಿದ್ದು, ತಾಲ್ಲೂಕಿನಾಧ್ಯಂತ ಅನೇಕ ಗ್ರಾಮಗಳಲ್ಲಿ ಯಾರಿಗೂ ಗೋಚರವಾಗದ ಅಪ್ರಕಟಿತ ಶಿಲಾಶಾಸನಗಳನ್ನು ಹಾಗೂ ವೀರಗಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ.
ವೀರಗಲ್ಲುಗಳ ಪೋಟೋವನ್ನು ತೆಗೆದು ಭಾರತೀಯ ಪುರಾತತ್ವ ಇಲಾಕೆ ಹಾಗೂ ಮೈಸೂರಿನ ಶಾಸನ ತಜ್ಞ ಡಾ|| ಎಸ್. ನಾಗರಾಜಪ್ಪ ಅವರಿಗೆ ಕಳುಹಿಸಿದರು, ಅದನ್ನು ಪರಿಶೀಲಿಸಿದ ತಜ್ಞರು ಈ ವೀರಗಲ್ಲುವಿನಲ್ಲಿ ಆರು ಸಾಲುಗಳಿದ್ದು, ಇದರ ಬಾಷೆ ಮತ್ತು ಲಿಪಿ ಕ್ರಿಶ ೭-೮ನೆಯ ಶತಮಾನದ ಕನ್ನಡ ಭಾಷೆಯದ್ದಾಗಿದೆ ಎಂದು ತಿಳಿದಿದೆ. ಶ್ರೀ ಕಚ್ಚವ ಬೋಯ ಎಂಬುವವನು ಈ ವೀರಗಲ್ಲನ್ನು ಕೆತ್ತಿಸಿದ್ದಾನೆ ಎಂದು ತಜ್ಞ ನಾಗರಾಜಪ್ಪನವರ ಅಭಿಪ್ರಾಯ.
ಇತ್ತೀಚೆಗೆ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ, ಯಂಬ್ರಹಳ್ಳಿ, ಸಾದಹಳ್ಳಿ, ಪೋಲನಹಳ್ಳಿ, ಕುಂದಾಣ ಬೆಟ್ಟ, ಲಿಂಗದೀರಗೊಲ್ಲಹಳ್ಳಿ, ಗೋಣೂರು ಹೊಸಹಳ್ಳಿ, ಚನ್ನಹಳ್ಳಿ, ಅತ್ತಿಬೆಲೆ, ಬಿದಲೂರು, ಬ್ಯಾಡರಹಳ್ಳಿ, ಬನ್ನಿಮಂಗಲ ಕೆರೆ, ಪಟ್ಟಣದ ಕೋಟೆ ಸಿದ್ದೇಶ್ವರ ದೇವಾಲಯ, ಲಿಂಗದೀರಗೊಲ್ಲಹಳ್ಳಿ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಅಪ್ರಕಟಿತ ಶಾಸನಗಳು ಕಂಡು ಬಂದಿದ್ದು, ತಜ್ಞರು ಗುರುಸಿದ್ದಯ್ಯ ಜೊತೆಗೂಡಿ ಓದಿ ದಾಖಲು ಮಾಡಿದ್ದಾರೆ, ಇವೆಲ್ಲವನ್ನು ಸಾಹಿತಿ, ನಿವೃತ್ತ ಶಿಕ್ಷಕ ಸಂಶೋಧಕ ಗುರುಸಿದ್ದಯ್ಯನವರು ದೇವನಹಳ್ಳಿ ಬೆಡಗು ಎಂಬ ಕೃತಿ ರಚನೆಯ ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ.