ಸಂಶಯ ನಿವಾರಣೆಗೆ ಇ.ವಿ.ಪ್ಯಾಟ್ ಯಂತ್ರ ಹೆಚ್ಚು ಸಹಕಾರಿ

ಕೋಲಾರ,ಮಾ,೧೩- ಕೆಲವರಲ್ಲಿ ನಾವು ಹಾಕುವ ಮತ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗುತ್ತದೆ ಎಂಬ ಸಂಶಯ ಮತ್ತು ಅನುಮಾನಗಳು ಇರುವುದು ಸಹಜ ಆದರೆ ಈ ಅನುಮಾನಗಳನ್ನು ಹೋಗಲಾಡಿಸಲು ಇರುವ ಪರಿಹಾರವೇ ಇ.ವಿ.ಪ್ಯಾಟ್ ಯಂತ್ರವಾಗಿದೆ ಎಂದು ಮಾರ್ಗಸಂಖ್ಯೆ ೨೦ರ ಸೆಕ್ಟರ್ ಅಧಿಕಾರಿ ಗೋಪಿಕೃಷ್ಣನ್ ತಿಳಿಸಿದರು.
ನಗರದ ಸೆವೆಂತ್‌ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ ಕನಕನ ಪಾಳ್ಯ ಹಾಗೂ ಅಂಬೇಡ್ಕರ್ ನಗರ ಮತ್ತು ಧರ್ಮರಾಯ ನಗರಗಳ ಜನತೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮತದಾರರಿಗೆ ಇರುವ ಅನುಮಾನಗಳನ್ನು ಹೋಗಲಾಡಿಸಲು ಹಾಗೂ ಅದಕ್ಕೆ ಪರಿಹಾರ ನೀಡಲು ಇ.ವಿ. ಪ್ಯಾಟ್ ಯಂತ್ರ ಸಹಕಾರಿಯಾಗಿದೆ ಈ ಯಂತ್ರದ ವಿಶೇಷವೆಂದರೆ ನೀವು ಯಾವ ಪಕ್ಷದ ವ್ಯಕ್ತಿಗೆ ಮತ ಹಾಕಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ವೋಟು ಹಾಕಿದ ನಂತರ ಏಳು ಸೆಕೆಂಡುಗಳ ಕಾಲ ನಿಮಗೆ ಕಾಣುವ ಹಾಗೆ ನೀವು ಹಾಕಿದ ಮತ ಯಾವ ಚಿಹ್ನೆ ಹಾಗೂ ಅವರ ಹೆಸರನ್ನು ತಾವು ಈ ಯಂತ್ರದ ಮುಖಾಂತರವಾಗಿ ಪ್ರತ್ಯಕ್ಷವಾಗಿ ಕಾಣಬಹುದು ಎಂದು ತಿಳಿಸಿ, ಸಾಕ್ಷೀಕರಿಸಿದರು.
೨೦೨೩ ಮುಂದೆ ಬರುವ ವಿಧಾನಸಭಾ ಚುನಾವಣೆ ಬಗ್ಗೆ ಕೋಲಾರ ಜಿಲ್ಲಾ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇ.ವಿ.ಪ್ಯಾಟ್ ಕಂಟ್ರೋಲ್ ಯೂನಿಟ್ ಬ್ಯಾಲೆಟ್ ಯೂನಿಟ್‌ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಮ್ಮ ನಮ್ಮ ಸೆಕ್ಟರ್ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರತಿಯೊಬ್ಬರೂ ಮತದಾನ ತಮ್ಮ ಕರ್ತವ್ಯವೆಂದು ಭಾವಿಸಿ ಮತದಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮ ದೇಶದ ಸಾರ್ವಭೌಮತೆಯನ್ನು ಕಾಪಾಡುವ ನಿರ್ಧಾರ ಕೈಗೊಳ್ಳೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೂಟ್ ನಂಬರ್ ೨೧ರ ಸೆಕ್ಟರ್ ಅಧಿಕಾರಿ ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನ ಜಾಗೃತಿ ಮೂಡಿಸಿದ್ದು, ಈ ಕನಕನಪಾಳ್ಯ,ಅಂಬೇಡ್ಕರ್ ನಗರ ಮತ್ತು ಧರ್ಮರಾಯ ನಗರಗಳ ನೂರಾರು ಮಂದಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.