ಸಂವೇದಕ, ಇಂಜಿನ್ ವಿಫಲವಾದರು ಯಾನ ಯಶಸ್ವಿ

ಬೆಂಗಳೂರು,ಆ.೯- ಭಾರತದ ಮೂರನೇ ಚಂದ್ರಯಾನ-೩ರ ಲ್ಯಾಂಡರ್ ವಿಕ್ರಮ್ ಎಲ್ಲಾ ಸಂವೇದಕಗಳು ಮತ್ತು ಅದರ ಎರಡು ಎಂಜಿನ್‌ಗಳು ಕಾರ್ಯನಿರ್ವಹಿಸದಿದ್ದರೂ ಸಹ ಆಗಸ್ಟ್ ೨೩ ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಾಧ್ಯವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಲಾಭರಹಿತ ಸಂಸ್ಥೆ ದಿಶಾ ಭಾರತ್ ಆಯೋಜಿಸಿದ್ದ ‘ಚಂದ್ರಯಾನ-೩ ಭಾರತ್ ಪ್ರೈಡ್ ಸ್ಪೇಸ್ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮನಾಥ್, ಲ್ಯಾಂಡರ್ ‘ವಿಕ್ರಮ್’ನ ಸಂಪೂರ್ಣ ವಿನ್ಯಾಸವನ್ನು ವೈಫಲ್ಯಗಳನ್ನು ನಿಭಾಯಿಸುವ ರೀತಿಯಲ್ಲಿ ಮಾಡಲಾಗಿದೆ. ಎಲ್ಲವೂ ವಿಫಲವಾದರೆ, ಎಲ್ಲಾ ಸಂವೇದಕಗಳು ವಿಫಲವಾದರೆ ಅದು ಏನೂ ಕೆಲಸ ಮಾಡುವುದಿಲ್ಲ. ಇನ್ನೂ ಅದು (ವಿಕ್ರಮ್) ಲ್ಯಾಂಡಿಂಗ್ ಮಾಡುತ್ತದೆ. ಪ್ರೊಪಲ್ಷನ್ ಸಿಸ್ಟಮ್ ಉತ್ತಮವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-೩ ಜುಲೈ ೧೪ ರಂದು ಬಾಹ್ಯಾಕಾಶಕ್ಕೆ ಚಿಮ್ಮಿತು. ಇದು ಆಗಸ್ಟ್ ೫ ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿತು. ವಿಕ್ರಮ್ ಆಗಸ್ಟ್ ೨೩ ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡ್ ಆಗಲಿದೆ.
ಚಂದ್ರನ ಕಕ್ಷೆಯನ್ನು ೧೦೦ ಕಿ.ಮೀಗೆ ಇಳಿಸುವವರೆಗೆ ಈ ಡಿ-ಆರ್ಬಿಟಿಂಗ್ ತಂತ್ರಗಳನ್ನು ಇಂದು, ಆಗಸ್ಟ್ ೧೪ ಮತ್ತು ಆಗಸ್ಟ್ ೧೬ ರಂದು ನಡೆಸಲಾಗುವುದು ಎಂದು ಸೋಮನಾಥ್ ಹೇಳಿದರು.