ಸಂವಿಧಾನ ಶಿಲ್ಪಿಗೆ ಅಪಮಾನ: ಸಿಪಿಐಎಂ ಖಂಡನೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಕಲಬುರಗಿ:ಜ.23: ಸೋಮವಾರ ರಾತ್ರಿ ಕೋಟನೂರ್(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಕೃತ್ಯ ಖಂಡನಾರ್ಹ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅವರು ತಿಳಿಸಿದ್ದಾರೆ.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಕ್ಷದಿಂದ ಮಾನವ ಸರಪಳಿ ನಿರ್ಮಿಸಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ಭಾರತದ ಸಮಗ್ರ ಅಭಿವೃದ್ಧಿಗೆ, ಸರ್ವಜನತೆಯ ಸಮಾನತೆಗೆ ಸಂವಿಧಾನ ಕೊಟ್ಟ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡುವ ಮೂಲಕ ಭಾರತ ಸಂವಿಧಾನವನ್ನು, ಸಮಾನತೆಯನ್ನು ವಿರೋಧಿಸುವ ಮನೋಭಾವ ಇದರಲ್ಲಿ ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಭಾರತವನ್ನು ಕೋಮುವಾದಿ ನೆಲೆಯಲ್ಲಿ ವಿಚ್ಛಿದ್ರಗೈಯುತ್ತಿರುವ ಸಂವಿಧಾನವಿರೋಧಿ ಮನುವಾದಿ ಮನಸುಗಳು ಇಂತಹ ದುಷ್ಕೃತ್ಯಕ್ಕಿಳಿಯುತ್ತವೆ. ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ ಅವರು, ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.