ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಬನ್ನೂರು ರಾಜು

ಸಂಜೆವಾಣಿ ನ್ಯೂಸ್
ಮೈಸೂರು: ಜ.26:- ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಭಾರತ ಸಂವಿಧಾನವು ಸರ್ವರನ್ನೂ ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವ ದೀವಿಗೆಯಾಗಿದ್ದು ಇಂಥ ಸಂವಿಧಾನಕ್ಕೆ ಕಿಂಚಿತ್ತು ಅಪಾಯವಾದರೂ ಅದರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಅಗ್ರಹಾರದಲ್ಲಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಮಕ್ಕಳಲ್ಲಿ ಸಂವಿಧಾನದ ಅರಿವು ಮತ್ತು ರಾಷ್ಟ್ರಪ್ರಜ್ಞೆಮೂಡಿಸಲು ಗಣರಾಜ್ಯೋತ್ಸವದ ಮುನ್ನಾ ದಿನ ಗುರುವಾರ ‘ನಮ್ಮ ದೇಶ ಶ್ರೇಷ್ಠ ಭಾರತ’ ಎಂಬ ಹೆಸರಿನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದ ರಾಷ್ಟ್ರಗಳಲ್ಲೇ ನಮ್ಮ ಭಾರತ ಸಂವಿಧಾನವು ಸರ್ವ ಶ್ರೇಷ್ಠವಾಗಿದ್ದು ನಮ್ಮ ದೇಶದ ರಕ್ಷಾ ಕವಚವಾಗಿ ನಿಂತು ಜಗತ್ತಿನ ರಾಷ್ಟ್ರಗಳಲ್ಲೇ ಮಾದರಿ ಸಂವಿಧಾನವೆನಿಸಿ ಭಾರತಕ್ಕೆ ವಿಶ್ವಗುರು ಗೌರವವನ್ನು ತಂದು ಕೊಟ್ಟಿದೆಯೆಂದರು.
ದೇಶ ಪ್ರೇಮ, ದೇಶಭಕ್ತಿ, ದೇಶಾಭಿಮಾನ, ನಾಡ ಪ್ರೇಮ, ನಾಡ ಭಕ್ತಿ, ನಾಡಾಭಿಮಾನವನ್ನು ವಿದ್ಯಾರ್ಥಿ ದಿಸೆಯಲ್ಲೇ ಪ್ರತಿಯೊಬ್ಬರೂ ಮೈಗೂಡಿಸಿ ಕೊಂಡು ಬೆಳೆಯಬೇಕು. ಆಗ ದೇಶ ನನ್ನದೆಂಬ, ದೇಶೀಯರೆಲ್ಲ ನಮ್ಮವರೆಂಬ ಭಾವ ತುಂಬಿ ತುಳುಕುತ್ತದೆ. ನಮ್ಮ ಭಾರತ ದೇಶದಂತಹ ನೆಲದಲ್ಲಿ, ನೆಲೆಯಲ್ಲಿ ,ಪುಣ್ಯಭೂಮಿಯಲ್ಲಿ ಹುಟ್ಟುವುದೇ ಒಂದು ಭಾಗ್ಯ. ಇಂತಹ ಪುಣ್ಯವನ್ನು ನಾವು ಪಡೆದಿರುವುದಕ್ಕೆ ಅದೆಷ್ಟು ಜನ್ಮದ ಪುಣ್ಯ ಮಾಡಿರಬೇಕೋ ಏನೋ.
ಭಾರತವೆಂಬುದೇ ಒಂದು ಸ್ವರ್ಗ. ಇಂಥ ಭಾರತಾಂಬೆಯ ಮಕ್ಕಳಾಗಿರು ವುದಕ್ಕೆ ನಾವು ನಿತ್ಯ ತಾಯಿ ಭಾರತಿಯನ್ನು ಪೂಜಿಸುತ್ತಲೇ ಇರಬೇಕು. ಅಷ್ಟೇ ಅಲ್ಲ, ನಾವೆಲ್ಲಾ ತಾಯಿ ಭಾರತಿಯ ಮಕ್ಕಳೆಂಬ ಭಾವೈಕ್ಯತೆಯಲ್ಲಿ ಸೌಹಾರ್ದತೆಯಿಂದ ಬಾಳುತ್ತಾ ಭಾವೈಕ್ಯ ಭಾರತವನ್ನು ಕಟ್ಟಬೇಕೆಂದು ಹೇಳಿದರು.
ಗಣರಾಜ್ಯೋತ್ಸವದ ಹಿನ್ನಲೆ ಯಲ್ಲಿ ದೇಶ ಪ್ರೇಮವನ್ನು ಬಿಂಬಿಸುವಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಯಿತು.
ವಿಜೇತ ವಿದ್ಯಾರ್ಥಿಗಳಾದ ಭಾಷಣ ಸ್ಪರ್ಧೆಯಲ್ಲಿ ಜಯಲಕ್ಷ್ಮಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಬಿ.ಅಮೀನಾ (ಪ್ರ), ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಸಂದೀಪ್(ದ್ವಿ) ಮತ್ತು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಲಲಿತ ಕಲಾ ಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ಕಿರಣ್ (ಪ್ರ), ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ ಬಂದೇ ಗೌಡ (ದ್ವಿ) ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಬುಶ್ರಾ ಅಂಜುಮ್ (ಪ್ರ), ಆತಿಯಾ ಕೌಶಿಕ್ (ದ್ವಿ)ಅವರುಗಳಿಗೆ ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ ಅವರು ಬಹುಮಾನ ವಿತರಿಸಿ ಗೌರವಿಸಿದರು.
ಪ್ರಾರಂಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಸದುದ್ದೇಶದ ಬಗ್ಗೆ ತಿಳಿಸಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಗುಣಾವತಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನ ವಿಜ್ಞಾನ ಸಮಿತಿಯ ಹೆಚ್. ವಿ. ಮುರಳೀಧರ್, ಚಿತ್ರಕಲಾ ಶಿಕ್ಷಕ ಮನೋಹರ್ ಮುಂತಾದವರಿದ್ದರು.