ಸಂವಿಧಾನ ಬದ್ಧ ಹಕ್ಕು ಮತದಾನ

ಲಕ್ಷ್ಮೇಶ್ವರ,ಏ26: ಶೇ.100ರಷ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ಗದಗ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಮತ್ತು ಮಾಢಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇ 10 ರಂದು ಮತದಾನ ನಡೆಯಲಿದ್ದು, ಒತ್ತಡಗಳನ್ನು ಬದಿಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಿ, ಯಾವುದೇ ಆಮಿಷಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕೆ ಇರುವ ಸಂಜೀವಿನಿ ಯೋಜನೆಯಾಗಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರ ದುಡಿಮೆಗೆ ಕೆಲಸವಿಲ್ಲ ಎಂಬ ಚಿಂತೆಯನ್ನು ಉದ್ಯೋಗ ಖಾತ್ರಿ ಯೋಜನೆ ದೂರ ಮಾಡಿದೆ. ಖಾತ್ರಿ ಯೋಜನೆಯಡಿ 316 ರೂ. ದಿನಕ್ಕೆ ಕೂಲಿ ನೀಡಲಾಗುತ್ತದೆ. ಗ್ರಾಮೀಣರು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಯಕ ಬಂಧುಗಳ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ. ನಮೂನೆ- 6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವುದರಿಂದ ಹಾಜರಾತಿ, ಎನ್‍ಎಂಎಂಎಸ್ ಆ?ಯಪ್ ಬಳಕೆ ಮಾಡುವುದು, ಕೆಲಸಕ್ಕೆ ಬಂದವರಿಗೆ ಸರಿಯಾಗಿ ಕೂಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಬಡಿಗೇರ ಮಾತನಾಡಿ, ಜಮೀನಿನ ಮೇಲಿನ ಮೇಲ್ಮಣ್ಣು ಸಸ್ಯದ ಬೆಳವಣಿಗೆಗೆ ಅತ್ಯಂತ ಉಪಯುಕ್ತ ಖನಿಜಾಂಶ ಮತ್ತು ಪೆÇೀಷಕಾಂಶಗಳನ್ನು ಒಳಗೊಂಡಿರುತ್ತದೆ. ಅದರ ಸಂರಕ್ಷಣೆಗೆ ಬದು ನಿರ್ಮಾಣ ಪೂರಕವಾದ ಕಾಮಗಾರಿಯಾಗಿದೆ. ಪ್ರಸಕ್ತ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಲ ಸಂಜೀವಿನಿ ಎಂಬ ಕಾರ್ಯಕ್ರಮ ರೂಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರೈತರ ಹೆಚ್ಚು ಉಪಯೋಗವಾಗಲಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕರಾದ ಕೃಷ್ಣಾ ಧರ್ಮರ ಮಾತನಾಡಿ, ಮತದಾನ ಮಾಡುವಾಗ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು. ಬೇಸಿಗೆ ಅವಧಿಯಲ್ಲಿ ಮಹಿಳೆಯರಿಗೆ ಕೆಲಸದಲ್ಲಿ ರಿಯಾಯತಿ ನೀಡುತ್ತವೆ, ಪ್ರತ್ಯೇಕವಾದ ಕೆಲಸವನ್ನು ಆರಂಭಿಸಿ ಅವರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಹೆಚ್ಚು ಹೆಚ್ಚು ಮಹಿಳೆಯರು ಕೆಲಸಕ್ಕೆ ಬರುಲು ಪ್ರೇರಣೆ ನೀಡುವಂತೆ ಕಾಯಕ ಬಂಧುಗಳು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ತಿಳಿಸಿದರು.
ಯಳವತ್ತಿ, ಮಾಢಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರವೀಣ ಗೊಣೆಮ್ಮನವರ, ಮಂಜುನಾಥ ಮಲ್ಲೂರ, ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಟಿಎಂಐಎಸ್ ಚಂದ್ರಶೇಖರ ಹಳ್ಳಿ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ಟಿಎಇ ಪ್ರದೀಪ ನರೇಗಲ್ಲ, ಲಿಂಗರಾಜ ಅರಿಷಿಣದ, ಬಿಎಫ್‍ಟಿ, ಜಿಕೆಎಂ ಗ್ರಾಪಂ ಸಿಬ್ಬಂದಿ ಇದ್ದರು.