ಸಂವಿಧಾನ ಬದಲಾವಣೆ ಹೇಳಿಕೆ ಖಂಡನೀಯ

ಬೆಂಗಳೂರು:೧೯- ಲೋಕಸಭಾ ಚುನಾವಣೆ ಗೆಲುವಿಗಾಗಿ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾತುಗಳನ್ನಾಡುತ್ತಿರುವುದು ಖಂಡನೀಯ. ದಲಿತರು ಬಿಜೆಪಿಯನ್ನು ದೂರವಿಡಬೇಕು ಎಂದು ಮಹಾನಾಯಕ ಸಂಘಟನೆಯ ಅಧ್ಯಕ್ಷ ಹರೀಶ್ ಬಾಬು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ ಕ್ಷೇತ್ರದಲ್ಲಿ ದಲಿತರ ಮತ ತೀರಾ ಕಡಿಮೆ. ದಲಿತರ ಮತ ಬರದಿದ್ದರೂ ಪರವಾಗಿಲ್ಲ. ಮೇಲ್ವರ್ಗದ ಮತಗಳನ್ನು ಸೆಳೆದು ಚುನಾವಣೆ ಗೆಲ್ಲಬೇಕೆಂಬುದು ಬಿಜೆಪಿ ಪಕ್ಷದ ಹಿಡೆನ್ ಅಜೆಂಡಾ ಇಟ್ಟುಕೊಂಡಿದ್ದಾರೆ. ಹೀಗಾಗಿ, ಸಂವಿಧಾನ ಬದಲಾವಣೆ ಮಾತನ್ನು ಪುನರುಚ್ಛರಿಸುತ್ತಿದ್ದು, ದಲಿತ ಸಮುದಾಯ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ದೇಶದಲ್ಲಿ ೪೦೦ ಕ್ಷೇತ್ರಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೈಕಮಾಂಡ್ ಅವರ ನಿರ್ದೇಶನದಲ್ಲಿ ಈ ರೀತಿ ಹೇಳಿಕೆ ಕೊಡಿಸುತ್ತಿದ್ದಾರೆ. ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದ ಇವರು ಲೋಕಸಭಾ ಚುನಾವಣೆ ಬರ್ತಿದ್ದಂತೆ ಒಂದೊಂದೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು, ಅಯೋಧ್ಯೆ ರಾಮ ಮಂದಿರ ದೇವಸ್ಥಾನ ನಿರ್ಮಾಣ ಕೆಲಸ ಇನ್ನು ಪೂರ್ಣವಾಗಿಲ್ಲ.ಆದರೂ, ಜನರನ್ನು ಮರಳು ಮಾಡಲು ಅಪೂರ್ಣವಾದ ರಾಮ ಮಂದಿರದ ಹೆಸರೇಳಿಕೊಂಡು ೨೦೨೪ರ ಲೊಕಸಭೆ ಗೆಲ್ಲಲು ಹೊರಟಿದ್ದಾರೆ.. ಶ್ರೀರಾಮ ದೇವರ ಹೆಸರಲ್ಲಿ ಬಿಜೆಪಿ ಪಕ್ಷ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡು ಎಂದು ವಾಗ್ಧಾಳಿ ನಡೆಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಸಾಕಾರಗೊಂಡು ಸಮಸಮಾಜ ನಿರ್ಮಾಣವಾಗಬೇಕಾದರೆ ದಲಿತ,ಹಿಂದುಳಿದ ಸಮುದಾಯಗಳು ಬಿಜೆಪಿಯನ್ನು ದೂರವಿಡಬೇಕಿದೆ. ಇಲ್ಲವಾದಲ್ಲಿ ಶೂದ್ರ ಸಮುದಾಯಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಆರ್.ಟಿ.ನಗರ ಬ್ಲಾಕ್ ಅಧ್ಯಕ್ಷರು ಎಸ್.ಸಿ.ಘಟಕ- ಬೆಂಕಿಭೀಮಣ್ಣ, ಕೆ.ಜಿ.ಹಳ್ಳಿ ಬ್ಲಾಕ್ ಅಧ್ಯಕ್ಷ ರವಿಕುಮಾರ್, ನಾಗವಾರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗಜೇಂದ್ರ, ಹೆಚ್.ಬಿ.ಆರ್ ವಾರ್ಡ್ ಅಧ್ಯಕ್ಷ ಸುನೀಲ್ ಕುಮಾರ್, ಕಾರ್ಯದರ್ಶಿ ರವಿ, ಶರೀಫ್, ಸಂತೋಷ್ ಕುಮಾರ್, ಮುನಿಸ್ವಾಮಿ, ಮುರುಗೇಶ್ ಕುಮಾರ್ ಉಪಸ್ಥಿತರಿದ್ದರು