ಸಂವಿಧಾನ, ಪ್ರಜಾಪ್ರಭುತ್ವ ರಾಷ್ಟ್ರದ ಜೀವಾಳ

ಕಲಬುರಗಿ,ಸೆ.15: ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಳಲ್ಪಡುವ ಅದ್ಭುತ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳೇ ಪ್ರಭುಗಳಾಗಿದ್ದು, ‘ಮತದಾನ’ವೆಂಬ ದೊಡ್ಡ ಅಸ್ತ್ರ ಹೊಂದಿದ್ದಾರೆ. ದೇಶ, ಧರ್ಮ, ಜಾತಿ, ಭಾಷೆ, ಪ್ರಾಂತ್ಯಗಳ ಆಧಾರದ ಮೇಲೆ ಮೇಲು-ಕೀಳು ಮಾಡದೆ, ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ದೇಶದ ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕು. ಯಾವುದೇ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಯಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ‘ಎನ್.ಎಸ್.ಎಸ್‍ಘಟಕ’ದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯಲ್ಲಿ ‘ಸಂವಿಧಾನದ ಪೀಠಿಕೆ ಓದು’ವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮವಿದ್ದಂತೆ. ಅದರಲ್ಲಿ ದೇಶದ ಸಮಗ್ರವಾದ ಚಿತ್ರಣವನ್ನು ನೀಡಲಾಗಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಬೃಹತ ಸಂವಿಧಾನ, ಆಡಳಿತ ವ್ಯವಸ್ಥೆ ಹೊಂದಿದೆ. ಸಂವಿಧಾನವು ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವೆಂದು ಸಾರಿದೆ. ರಾಷ್ಟ್ರದ ಅಭಿವೃದ್ದಿಯಲ್ಲಿ ಸಂವಿದಾನ ಮತ್ತು ಪ್ರಜಾ ಪ್ರಭುತ್ವದ ಮೌಲ್ಯಗಳು ತುಂಬಾ ಅವಶ್ಯಕವಾಗಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಮಲ್ಲಿಕಾರ್ಜುನ ದೊಡ್ಡಮನಿ, ಶಮೀನಾ ಬೇಗಂ, ಸಾಹೇಬಗೌಡ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿ ಮಠ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.