ಸಂವಿಧಾನ ಪುಸ್ತಕ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕ ಡೊಂಗರಗಾಂವ

ಅಥಣಿ:ಜ.10: ಭಾರತದ ಸಂವಿಧಾನದ ಸಮಗ್ರ ಮಾಹಿತಿಯನ್ನು ಒಳಗೊಂಡ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪಟ್ಟಣದ ಶಿವಶರಣ ಹರಳಯ್ಯ ಸಮುದಾಯ ಭವನದಲ್ಲಿ ಬಡವರಿಗೆ ಮತ್ತು ದೀನ ದಲಿತರಿಗೆ ಹಣ್ಣು ಹಂಪಲ ವಿತರಿಸುವ ಜೊತೆಗೆ ಭಾರತದ ಸಂವಿಧಾನದ ಮಾಹಿತಿಯನ್ನು ಒಳಗೊಂಡ ಪುಸ್ತಕಗಳನ್ನು ವಿತರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನದಲ್ಲಿ ನಮಗೆ ಕಲ್ಪಿಸಿದ ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು, ಪ್ರತಿಯೊಬ್ಬರೂ ಕಾನೂನಾತ್ಮಕ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಆನಂತರ ಜೆಡಿಎಸ್ ಪಕ್ಷದ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಐಹೊಳೆ ಮಾತನಾಡಿ ಸರಳ ಸಜ್ಜನಿಕಿಯ ವ್ಯಕ್ತಿತ್ವ ಹೊಂದಿರುವ ಮಾಜಿ ಶಾಸಕ ಶಹಾಜಹಾನ ಡೊಂಗರಗಾವ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಯಾವುದೇ ವೈಭವೀಕರಣವಿಲ್ಲದೆ ದೀನ ದಲಿತರು, ಬಡವರು ಹಾಗೂ ಅನಾಥ ಮಕ್ಕಳೊಂದಿಗೆ ಸರಳ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಭಾರತದ ಸಂವಿಧಾನದ ಸಮಗ್ರ ಮಾಹಿತಿಯನ್ನು ಒಳಗೊಂಡ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಸಾರ್ವಜನಿಕರಿಗೆ ಕಾನೂನಾತ್ಮಕ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಬಂದಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಈ ವೇಳೆ ಮುಖಂಡರಾದ ದಿಲೀಪ ಕಾಂಬಳೆ, ರಸೂಲಸಾಬ ನಂದಗಾಂವ, ಅಶೋಕ ಪರಾಂಜಪೆ, ಸರಸ್ವತಿ ನೇಮಗೌಡ, ಕುಮಾರ್ ಗಸ್ತಿ, ಮಲ್ಲು ಗುಂಜಿಗಾವಿ, ಶಬ್ಬೀರಗೌಡ ಪಟೇಲ, ಮಹಾಲಿಂಗ ಖೋತರೆಡ್ಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,