ಸಂವಿಧಾನ ನೀಡಿದ ಹಕ್ಕು ತಪ್ಪದೆ ಚಲಾಯಿಸಿ : ಜಾಗೃತಿ ಜಾಥ

ದೇವದುರ್ಗ,ಏ.೧೪- ದೇಶದ ೧೮ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಮತದಾನ ಎನ್ನುವ ಶಕ್ತಿಯುತವಾದ ಹಕ್ಕು ನೀಡಿದ್ದು, ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ವೋಟ್ ಹಾಕುವ ಮೂಲಕ ಪ್ರಜ್ಞಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಾಂಡಪ್ಪ ಕೆ.ಬಂಗೇನವರ್ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಸಂವಿಧಾನ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವ ಶಕ್ತಿ ಕಟ್ಟಿದೆ. ಇಂಥ ಮಹತ್ವದ ಅವಕಾಶವನ್ನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ತಾಲೂಕಿನಲ್ಲಿ ಶೇ.೧೦೦ಮತದಾನ ಮಾಡಲು ಜನರು ಮುಂದಾಗಬೇಕು ಎಂದು ಹೇಳಿದರು.
ನಂತರ ಸಾರ್ವಜನಿಕ ಆಸ್ಪತ್ರೆ, ಸಾರ್ವಜನಿಕ ಕ್ಲಬ್ ಮೈದಾನ, ಮಿನಿವಿಧಾನಸೌಧ ಮುಂಭಾಗ ಸೇರಿ ವಿವಿಧೆಡೆ ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಪುರಸಭೆ ಸಿಬ್ಬಂದಿ ಗಂಗಾಧರ್, ಲಕ್ಷ್ಮಣ, ಹುಲಿಗೆಪ್ಪ, ಅನೀಲ್‌ಕುಮಾರ ಅಕ್ಕರಕಿ, ರಂಗಪ್ಪ ನಾಯಕ, ಅನೀಲ್‌ಕುಮಾಋ ಬಲ್ಲಿದ್, ಬಸವರಾಜ, ರಾಮು, ಶೃತಿ, ಎಚ್.ಶಿವರಾಜ ಇತರರಿದ್ದರು.