ಸಂವಿಧಾನ ದುರ್ಬಲ ಮಾಡುವ ಕುತಂತ್ರ: ನ್ಯಾ.ನಾಗಮೋಹನ ದಾಸ್

ಮೈಸೂರು: ಮಾ.19:- ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎಂದು ತಿಳಿದು ಅದರ ಅಪವ್ಯಾಖ್ಯಾನಕ್ಕೆ ಮುಂದಾಗಿದ್ದಾರೆ. ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸ ಆಗುತ್ತಿದೆ ಎಂದು ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ವಿಷಾಧ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕೆಯುಡಬ್ಲೂಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾಲ್ಕು ವರ್ಷದ ಹಿಂದೆ ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದಿದ್ದರು. ಆದರೆ ಸಂವಿಧಾನ ಓದು ಎಂಬ ನನ್ನ ಅಭಿಯಾನದಿಂದಾಗಿ ಅದು ಅಷ್ಟಕ್ಕೆ ನಿಂತಿತು. ಬದಲಿಗೆ ಈಗ ಸಂವಿಧಾನದ ಅಪವ್ಯಾಖ್ಯಾನ ನಡೆಯುತ್ತಿದೆ. ದೇಶದ ಉಪ ರಾಷ್ಟ್ರಪತಿಯು ಸಂಸತ್ತು ಏನು ಬೇಕಾದರೂ ತಿದ್ದುಪಡಿ ಮಾಡಬಹುದು. ಕಾನೂನು ಸಚಿವರು ಪ್ರಕರಣಗಳ ಇತ್ಯರ್ಥಕ್ಕಿಂತ ನೇಮಕಾತಿಯಲ್ಲಿ ಹೆಚ್ಚು ಸಮಯ ಆಳು ಮಾಡುತ್ತಿದ್ದಾರಿ ಎಂದು ಸುಪ್ರಿಂ ಕೋರ್ಟ್ ನ್ಯಾಯಾಧೀಶಕರನ್ನೇ ಪ್ರಶ್ನಿಸಿದರು. ಇತ್ತೀಚೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದರು.
ಸಂಸತ್ತಿನಲ್ಲಿ ಬದುಕಿಗಿಂತ ಭಾವೋದ್ವೇಗದ ವಿಷಯ ಮಾತ್ರ ಚರ್ಚೆಗೆ ಬರುತ್ತಿದೆ. ಸಂಸತ್ ಅಧಿವೇಶನದ ಐದು ದಿನವೂ ಯಾವುದೇ ಸಾರ್ವಜನಿಕ ವಿಷಯ ಚರ್ಚೆ ಆಗಿಲ್ಲ. ಬದಲಿಗೆ ನಮ್ಮ ತೆರಿಗೆ ಹಣ ವ್ಯಯವಾಗಿದೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ಸಿಬಿಐನಂತಹ ಸ್ವತಂತ್ರ ಸಂಸ್ಥೆಗಳೂ ಕೂಡ ಕೇವಲ ವಿಪಕ್ಷದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಆಡಳಿತ ಪಕ್ಷದವರೇನು ಸತ್ಯಹರಿಶ್ಚಂದರ್ರೇ ಎಂದು ಅವರು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯವನ್ನು ಅಪ್ರಸ್ತುತ ಮಾಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇದನ್ನು ಪ್ರಶ್ನಿಸಿದರೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೆಸರಲ್ಲಿ ಜೈಲಿಗೆ ಹಾಕುತ್ತಾರೆ. ಗೋಲಿಬಾರ್ ಹೆಸರಿನಲ್ಲಿ ಸಾಯಿಸಲಾಗುತ್ತದೆ. ಇಂಥ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ವೇಳೆ ಮಾಧ್ಯಮಗಳು ಜನರಿಗೆ ಏನು ಹೇಳಬೇಕು ಎಂಬುದು ಮುಖ್ಯ. ಇತ್ತೀಚೆಗೆ ಯುವಕರು ಹೆಚ್ಚಿನ ಮಂದಿ ಮಾಧ್ಯಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇವರೆಲ್ಲರೂ ದುಡಿದು ಮಾಧ್ಯಮದವರ ಬಂಡವಾಳ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳೇ ಒಂದು ನೀತಿ ಸಂಹಿತೆ ಅಡಿ ಸೇವಾ ಕ್ಷೇತ್ರ ಮುಂದುವರೆಸಿಕೊಂಡು ಹೋಗಬೇಕು. ಮಾಧ್ಯಮಗಳು ಜನರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಔಟ್‍ಲುಕ್ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣಪ್ರಸಾದ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಕರ್ನಾಟಕದ ಹೆಸರು ಮುಂಚೂಣಿಯಲ್ಲಿದೆಯೋ ಅಥವಾ ಹಿನ್ನಡೆ ಅನುಭವಿಸಿದೆಯೋ ಎಂದು ಯೋಚಿಸಿ. ಹಿನ್ನಡೆಯಲ್ಲಿದೆ ಎಂದಾದರೆ ಇದರಲ್ಲಿ ಮಾಧ್ಯಮದ ಪಾತ್ರ ಏನು ಎಂದು ಯೋಚಿಸಿ. ಮಾಧ್ಯಮವು ನೈತಿಕತೆಯಿಂದ ಕೆಲಸ ಮಾಡಿದ್ದರೆ ಕರ್ನಾಕದ ಸ್ಥಿತಿ ಹೀಗಿರುತ್ತಿತ್ತೆ? ಈ ಪರಿಸ್ಥಿತಿಗೆ ಕರ್ನಾಟಕದ ಮಾಧ್ಯಮ, ಸಂಪಾದಕರು, ವರದಿಗಾರರ ಪಾತ್ರ ಏನು? ಮನುಷ್ಯನ ಸ್ವಾತಂತ್ರ?ಯ ಎಲ್ಲಿಗೆ ತಲುಪಿದೆ. ಪ್ರಜಾಪ್ರಭುತ್ವದ ಸೂಚ್ಯಂಕ ಎಷ್ಟಿದೆ? ಹಸಿವಿನ ಪ್ರಮಾಣ ಯಾವ ಸ್ಥಾನದಲ್ಲಿದೆ? ಇಂಟರ್ನೆಂಟ್ ಶೆಡೌನ್ ಎಷ್ಟಿದೆ ಎಂಬುದನ್ನು ಚಿಂತಿಸಿ. ಮುಂದಿನ ಮೂರು ತಿಂಗಳು ಮಹತ್ವದ್ದು ಎಂಬುದನ್ನು ಮರೆಯಬೇಡಿ ಎಂದರು.
ಈ ಅವಧಿಯಲ್ಲಿ ಕರ್ನಾಟಕ ಹೇಗೆ ನಡೆದುಕೊಳ್ಳುತ್ತದೋ ಅದರ ಮೇಲೆ ರಾಜ್ಯದ ಭವಿಷ್ಯ ನಿಂತಿದೆ. ಯಾರೋ ಕಳುಹಿಸಿದ್ದನ್ನು ಏನೂ ನೋಡದೆ ಹಾಗೆ ಮುದ್ರಿಸಲಾಗುತ್ತಿದೆ. ಪತ್ರಿಕೆಗಳ ಮುಖಪುಟ ಒಳಗಿನ ಯಾವುದೇ ಪೇಜ್‍ನಲ್ಲಿರುತ್ತದೆ. ಮೊದಲ ಪುಟದಲ್ಲಿ ಅವರಿವರ ಸಾಧನೆಯ ಪಟ್ಟಿಯೇ ಇರುತ್ತದೆ. ಮಾಧ್ಯಮಗಳ ಕೆಲಸ ಯಾರದೋ ಉದ್ದೇಶವನ್ನು ಮತ್ತೊಬ್ಬರಿಗೆ ತಲುಪಿಸುವುದಲ್ಲ. ನಾವು ಪೆÇೀಸ್ಟ್ ಮನ್‍ಗಳ ಕೆಲಸ ಮಾಡಬೇಕಿಲ್ಲ. ಬಂದ ವರದಿಯನ್ನು ಪರಿಶೀಲಿಸಿ, ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗ 2022ರೊಳಗೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ. ಎಲ್ಲರಿಗೂ ಸೂರು ಕಲ್ಪಿಸುತ್ತೇವೆ, ಎಲ್ಲಾ ಮನೆಗೆ ವಿದ್ಯುತ್ ಕಲ್ಪಿಸುತ್ತೇವೆ ಎಂದು ಹೇಳಿತ್ತು. ಆದರೆ ಈಗ ಏನಾಗಿದೆ ಎಂದು ಯಾರಾದರೂ ನೋಡಿದ್ದೀರಾ? ಪಿ.ಸಾಯಿನಾಥ್ ಅವರು ಹೇಳಿದಂತೆ ಶೇ.85ರಷ್ಟು ಮಂದಿ ಬೆರಳಚ್ಚುಗಾರರು ಇದ್ದಾರೆಯೇ ಹೊರತು ಪತ್ರಕರ್ತರಲ್ಲ ಎಂದರು.
ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ರವೀಂದ್ರಭಟ್ಟ ಅವರಿಗೆ ಗೊಮ್ಮಟ ಮಾಧ್ಯಮ ಪ್ರಶಸ್ತಿ, ಯಶೋಧಮ್ಮ ಜಿ. ನಾರಾಯಣ ಪ್ರಶಸ್ತಿಯನ್ನು ನಾಗಮಣಿ ಎಸ್. ರಾವ್, ಡಿವಿಜಿ ಪ್ರಶಸ್ತಿಯನ್ನು ಬಿ.ವಿ.ಮಲ್ಲಿಕಾರ್ಜುನಯ್ಯ, ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಜಿ. ವೀರಣ್ಣ, ಎಸ್.ವಿ. ಜಯಶೀಲರಾವ್ ಪ್ರಶಸ್ತಿಯನ್ನು ವಸಂತ ನಾಡಿಗೇರ, ಡಾ.ಎಂ.ಎಂ. ಕಲಬುರ್ಗಿ ಪ್ರಶಸ್ತಿಯನ್ನು ಅರುಣಕುಮಾರ್ ಹಬ್ಬು, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿಯನ್ನು ಕೆ.ಎನ್. ರವಿ, ಕಿಡಿ ಶೇಷಪ್ಪ ಪ್ರಶಸ್ತಿ- ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ, ಪಿ.ಆರ್. ರಾಮಯ್ಯ ಪ್ರಶಸ್ತಿಯನ್ನು ಮುಂಜಾನೆ ಸತ್ಯ, ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಮೊಹಮ್ಮದ್ ಬಾಷಾ ಗೂಳ್ಯಂ, ಪಿ. ರಾಮಯ್ಯ ಪ್ರಶಸ್ತಿಯನ್ನು ಎಂ.ಜಿ. ಪ್ರಭಾಕರ, ಮ. ರಾಮಮೂರ್ತಿ ಪ್ರಶಸ್ತಿಯನ್ನು ಶ್ರೀಶೈಲ ಗು.ಮಠದ, ಗರುಡನಗಿರಿ ನಾಗರಾಜ್ ಪ್ರಶಸ್ತಿಯನ್ನು ಎನ್. ಬಸವರಾಜ್, ಮಹದವಪ್ರಕಾಶ್ ಪ್ರಶಸ್ತಿಯು ಜಿ.ಆರ್. ಸತ್ಯಲಿಂಗರಾಜು, ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿಯು ನಾಗರಾಜ ಶೆಣೈ, ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಆರ್.ಎನ್. ಸಿದ್ದಲಿಂಗಸ್ವಾಮಿ, ಎಂ. ನಾಗೇಂದ್ರರಾವ್ ಪ್ರಶಸ್ತಿ ಉಳ್ಳಿಯಡ ಎಂ. ಪೂವಯ್ಯ, ಅಭಿಮಾನಿ ಪ್ರಕಾಶನ ಪ್ರಶಸ್ತಿ ಸಿರಾಜ್ ಬಿಸರಳ್ಳಿ, ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ ಜಯತೀರ್ಥ ಪಾಟೀಲ್, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ ಎಸ್.ಜಿ. ತುಂಗರೇಣುಕಾ, ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ ಡಿ.ಎನ್. ಶಾಂಭವಿ, ಟಿ.ಕೆ. ಮಲಗೊಂಡ ಪ್ರಶಸ್ತಿ ನಾರಾಯಣ ಹೆಗಡೆ, ಆರ್. ಶಾಮಣ್ಣ ಪ್ರಶಸ್ತಿ ವಿಜಯ ಕರ್ನಾಟಕ ಬೆಂಗಳೂರು ಆವೃತ್ತಿಗೆ, ವಿಶೇಷ ಪ್ರಶಸ್ತಿಯನ್ನು ಜಯಲಕ್ಷ್ಮೀ ಸಂಪತ್‍ಕುಮಾರ್, ಎಚ್.ಎನ್. ಆರತಿ, ಎಸ್.ಎಂ. ಜಂಬುಕೇಶ್ವರ ಮತ್ತು ಕೆ. ದೀಪಕ್ ಅವರಿಗೆ ನೀಡಿ ಗೌರವಿಸಲಾಯಿತು.