ಸಂವಿಧಾನ ಜಾಗೃತಿ ಭಾಷಣ ಕಾರ್ಯಕ್ರಮ ಮೊಟಕು: ಹೂಗ್ಯಂ ಪಿಡಿಒ ವಿರುದ್ಧ ಆರೋಪ

ಸಂಜೆವಾಣಿ ವಾರ್ತೆ
ಹನೂರು ಫೆ 15 :- ಸಂವಿಧಾನ ಜಾಗೃತಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಮುಖ್ಯ ಭಾಷಣದ ಸಮಯದಲ್ಲಿ ಉದ್ದೇಶ ಪೂರ್ವಕವಾಗಿಯೇ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗಿದೆ ಎಂದು ಪಿಡಿಒ ಪುಷ್ಪಲತಾ ನಡೆಯ ಬಗ್ಗೆ ಸ್ಥಳೀಯರು ಅಂಬೇಡ್ಕರ್ ಕಾರ್ಯಕ್ರಮಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸರ್ಕಾರ ಜಿಲ್ಲಾಡಳಿತ ಆದೇಶದಂತೆ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು ಅವರು ಮಾತನಾಡುತ್ತಾ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ತಿಳಿಸುವ ಸಮಯದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡಿದೆ.
ಹೂಗ್ಯಂ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ವೇದಿಕೆಯಲ್ಲಿದ್ದಂತಹ ಗಣ್ಯರನ್ನು ಸ್ವಾಗತಿಸಿದ ಮುಂದಿನ ಕಾರ್ಯಕ್ರಮ ಜರಗಿತು. ನಂತರ ಮುಖ್ಯ ಭಾಷಣಕಾರರಾಗಿ ನೇಮಿಸಿದ್ಧ ಶಿಕ್ಷಕರು ಹಾಜರಾಗದ ಹಿನ್ನೆಲೆ ಇಲ್ಲಿನ ಶಾಲೆಯ ಶಿಕ್ಷಕ ಸಿದ್ದರಾಜು ಅವರನ್ನು ಮುಖ್ಯ ಭಾಷಣಕಾರರಾಗಿ ಅವಕಾಶ ಕಲ್ಪಿಸಲಾಗಿ ಮಾತನಾಡಲು ಪ್ರಾರಂಭಿಸಿದರು. ಮಾತನಾಡುತ್ತಿದ್ದಂತೆ ದಿಢೀರನೆ ವಿದ್ಯುತ್ ಕಡಿತಗೊಂಡಿದೆ.
ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಡೀಸೆಲ್ ಜನರೇಟರ್ ಅಳವಡಿಸಿ ಇದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯ ಭಾಷಣದ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡಿದೆ. ತಕ್ಷಣ ಅಲ್ಲೇ ಇದ್ದಂತಹ ಪಿಡಿಒ ಪುಷ್ಪಲತಾ ಅವರು ಕರೆಂಟ್ ಬರುವುದಿಲ್ಲ ಕಾರ್ಯಕ್ರಮವನ್ನು ಮುಗಿಸಿ ಎಂದು ತಿಳಿಸಿ ವೇದಿಕೆ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.
ಈ ಬಗ್ಗೆ ಅಲ್ಲೇ ಇದ್ದಂತಹ ಸ್ಥಳೀಯರು ಮುಖ್ಯ ಭಾಷಣದ ವೇಳೆ ವಿದ್ಯುತ್ ಕಡಿತಗೊಳಿಸಲಾಗಿದೆ. ಅಂಬೇಡ್ಕರ್ ವಿಚಾರಗಳನ್ನು ತಿಳಿಸುವಾಗಲೇ ಇದು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಬಗ್ಗೆ ಪ್ರಶ್ನಿಸಿದಾಗ ಡೀಸೆಲ್ ಜನರೇಟರ್ ನಲ್ಲಿ ಡೀಸೆಲ್ ಖಾಲಿಯಾಗಿದೆ ಎಂದು ಸಬೂಬು ಹೇಳತೊಡಗಿದರು.
ಇದರ ಬಗ್ಗೆ ಪ್ರಶ್ನಿಸಿದ ಸ್ಥಳೀಯರಾದ ಕುಮಾರ್, ಸುಂದ್ರ, ಮಾದಪ್ಪ ಅವರು ಪಕ್ಕದಲ್ಲಿ ಇದ್ದಂತಹ ಡೀಸೆಲ್ ಜನರೇಟರ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಇನ್ನೂ ಡೀಸೆಲ್ ಇರುವುದು ಕಂಡುಬಂದಿದೆ. ಇದರ ಬಗ್ಗೆ ಆಕ್ರೋಶಗೊಂಡ ಇವರು ಪಿಡಿಒ ಅವರು ಇದನ್ನು ಬೇಕು ಅಂತಲೇ ಮಾಡಿದ್ದಾರೆ ಎಂದು ಆರೋಪಿಸಿದರು.
ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಬೇಕೆಂಬ ಆಶಯದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ವ್ಯವಸ್ಥಿತವಾಗಿ ರೂಪಿಸಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿಯಾದ ಪಿಡಿಒ ಪುಷ್ಪಲತಾ ಅವರ ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ತಿಳಿಯಬೇಕಾದ ಮುಖ್ಯ ಭಾಷಣದ ವೇಳೆ ಅಂಬೇಡ್ಕರ್ ವಿಚಾರಗಳು ಸಂವಿಧಾನದ ಆಶಯಗಳು ತಲುಪದಿರುವಂತಹ ಸ್ಥಿತಿ ನಿರ್ಮಾಣವಾಯಿತು.