ಸಂವಿಧಾನ ಜಾಗೃತಿ ಜಾಥ: ವಿವಿಧ ಗ್ರಾಮ ಪಂಚಾಯತಿಯಿಂದ ಅದ್ದೂರಿ ಸ್ವಾಗತ

ರಾಯಚೂರು.ಫೆ.೧೫- ಸಂವಿಧಾನ ಜಾಗೃತಿ ಜಾಥದ ಅಂಗವಾಗಿ ಫೆ.೧೩ ರಂದು ನಾಗರಹಾಳ ಗ್ರಾಮ ಪಂಚಾಯತಿಯಲ್ಲಿ ಅದ್ದೂರಿಯಾಗಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂತರ ಫೆ.೧೪ರಂದು ಬಯ್ಯಾಪೂರ ಗ್ರಾಮ ಪಂಚಾಯತಿಗೆ ಸಂವಿಧಾನ ಜಾಗೃತಿ ಜಾಥವನ್ನು ಹಸ್ತಾಂತರಿಸಲಾಯಿತು.
ಬಯ್ಯಾಪೂರ ಗ್ರಾಮ ಪಂಚಾಯತಿ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮದ ಮಹಿಳೆಯರು ಶಾಲಾ ಮಕ್ಕಳಿಂದ ಕಳಸ ಕುಂಭಗಳನ್ನೊತ್ತು, ಸಂವಿಧಾನಪರ ಘೋಷಣೆಗಳನ್ನು ಕೂಗುತ್ತಾ ಅದ್ದೂರಿಯಾಗಿ ಜಾಥವನ್ನು ಸ್ವಾಗತಿಸಿದರು.
ಬಯ್ಯಾಪೂರ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥ ಮೆರವಣಿಗೆ ಮುಗಿಸಿ ಉಪ್ಪಾರನ ನಂದಿಹಾಳ, ಆಮದಿಹಾಳ, ಬನ್ನಿಗೊಳ, ಹೂನೂರು ಗ್ರಾಮ ಪಂಚಾಯತಿಯಲ್ಲಿ ಸಂಚಾರವನ್ನು ಮುಂದುವರೆಸಲಾಯಿತು. ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥದ ಸ್ಥಬ್ಧ ಚಿತ್ರಕ್ಕೆ ಮಾರ್ಲಾಣೆ ಮಾಡುವುದರ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ಹೂನೂರು ಗ್ರಾಮ ಪಂಚಾಯತಿಯಲ್ಲಿ ಜಾಥದ ಮೆರವಣಿಗೆ ಮಾಡಿ ಹಟ್ಟಿ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ಮುದಗಲ್ ಪಟ್ಟಣದಲ್ಲಿ ಅತ್ಯಂತ ಅದ್ದೂರಿಯಿಂದ ಸ್ವಾಗತಿಸಿ, ಅಧಿಕಾರಿಗಳು, ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ಥಬ್ಧಚಿತ್ರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ, ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ, ಸಂವಿಧಾನ ಪೀಠಿಕೆ ವಾಚನ ಮಾಡಿದರು.
ಮುದಗಲ್ ಪಟ್ಟಣದಲ್ಲಿ ಸಂಜೆ ಎಲ್.ಇ.ಡಿ ಪರದೆಯ ಮೂಲಕ ಸಂವಿಧಾನದ ಕುರಿತು ವಿಡಿಯೋ ಕ್ಲಿಪಿಂಗ್‌ಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.