ಸಂವಿಧಾನ ಜಾಗೃತಿ ಜಾಥಾ: ರಥಕ್ಕೆ ಸ್ವಾಗತ

ಗದಗ,ಫೆ12: ಭಾರತದ ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಸಂವಿಧಾನ ಜಾಥಾಗೆ ಈಗಾಗಲೇ ಚಾಲನೇ ನೀಡಲಾಗಿದೆ. ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಸಂಚರಿಸುವ ಮೂಲಕ ಜನ ಸಾಮಾನ್ಯರಿಗೆ ಸಂವಿಧಾನ ಮಹತ್ವ ಹಾಗೂ ಧ್ಯೇಯೋದ್ದೇಶಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ.

ಗಣರಾಜ್ಯೋತ್ಸವ ದಿನಾಚರಣೆಯಂದು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರಿಂದ ಚಾಲನೆಗೊಂಡ ಸಂವಿಧಾನ ಜಾಥಾ ರೂಪಕ ಜಿಲ್ಲಾದ್ಯಂತ ಸಂಚಾರ ಕೈಗೊಳ್ಳುತ್ತಿದೆ. ಫೆ. 10 ಶನಿವಾರದಂದು ಸಂವಿಧಾನ ಜಾಗೃತಿ ರಥವು ಗದಗ ತಾಲೂಕಿನ ಅಂತೂರ-ಬೆಂತೂರ, ಕುರ್ತಕೋಟಿ, ಅಸುಂಡಿ ಹಾಗೂ ಕುರ್ತಕೋಟಿ ಗ್ರಾಮಗಳಿಗೆ ಆಗಮಿಸಿತ್ತು.

ತಮ್ಮ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ತದನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದೇಶದ ಆಸ್ತಿಗಳಾದ ವಿಧ್ಯಾರ್ಥಿಗಳು ವಿವಿಧ ಮಹನೀಯರ ವೇಷಧಾರಿಗಳಾಗಿ ಮೆರವಣಿಗೆಗೆ ಮೆರಗು ತುಂಬಿದರು. ತದ ನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಮಹತ್ವ ಹಾಗೂ ಅದರ ಧ್ಯೇಯೋದ್ದೇಶಗಳ ಕುರಿತು ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಯಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಧಿಕಾರಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.