ಸಂವಿಧಾನ ಜಾಗೃತಿ ಜಾಥಾ ನಿತ್ಯ ಸಂಚಾರ,ಎಲ್ಲೆಡೆ ಜೈಕಾರ

ಕಲಬುರಗಿ,ಫೆ.5: ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಚಾಲನೆಗೊಂಡ ಸಂವಿಧಾನ ಜಾಗೃತಿ ಜಾಥವು ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸಂಚಾರ ಕೈಗೊಂಡಿದ್ದು, ಎಲ್ಲೆಡೆ ಸಂವಿಧಾನಕ್ಕೆ ಜೈಕಾರ ಕೇಳಿಬರುತ್ತಿದೆ.

ಸಂವಿಧಾನ ಜಾಗೃತಿ ಜಾಥಾ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ರವಿವಾರ
ಸೇಡಂ ತಾಲ್ಲೂಕಿನ ಹಂದರಕಿ, ದುಗನೂರ, ಕೋಲಕುಂದಾ, ಮೋತಕಪಲ್ಲಿ ಗ್ರಾಮಗಳಲ್ಲಿ ಒಂದು ಸ್ಥಬ್ದಚಿತ್ರ ವಾಹನ ಹಾಗೂ ಆಳಂದ ತಾಲ್ಲೂಕಿನ ನರೋಣ, ಬೋಧನ, ಕಮಲನಗರ, ಬೆಳಮಗಿ, ತಡಕಲ ಗ್ರಾಮಗಳಲ್ಲಿ ಇನ್ನೊಂದು ವಾಹನ ಸಂಚರಿಸಿ ಸಂವಿಧಾನ ಮೂಲಾಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿತು.

ಗ್ರಾಮದ ಮಹಿಳೆಯರು ಕುಂಭ ಮೇಳ ಹೊತ್ತು,ಆರತಿ ಬೆಳಗಿ ಸಡಗರ ಸಂಭ್ರಮದಿಂದ ಜಾಥಾಕ್ಕೆ ಸ್ವಾಗತಿಸಿದರು. ಗ್ರಾಮದ ಮುಖಂಡರು, ಸ್ಥಳೀಯ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಎಲ್ಲೆಡೆ ಸಂವಿಧಾನ ಹಬ್ಬ ಕಳೆ ಕಟ್ಟಿದೆ.

ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.