ಸಂವಿಧಾನ ಜಾಗೃತಿ ಜಾಥಾಕ್ಕೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಚಿಟಗುಪ್ಪ,ಫೆ.16-ಭಾರತ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥ ತಾಲೂಕಿನ ಕೋಡಂಬಲ್ ಗ್ರಾಮಕ್ಕೆ ಬುಧವಾರ ಆಗಮಿಸಿದಾಗ ಕೋಡಂಬಲ್ ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ್ ಭಂಡಾರಿ, ಉಪಾಧ್ಯಕ್ಷ ವಿಷ್ಣುವರ್ಧನ್ ಬುದ್ಧ ಅವರು ಡಾ.ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ಗ್ರಾಮ ಪಂಚಾಯತ ಸರ್ವಸದಸ್ಯರು, ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಗುರು ಹಿರಿಯರು, ವಿವಿಧ ಸಂಘಟನೆಯ ಅಧ್ಯಕ್ಷರು, ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೂಡಿ ಸಡಗರ ಸಂಭ್ರಮದಿಂದ ಜಾಥಕ್ಕೆ ಸ್ವಾಗತ ಕೋರಿದರು.
ಶಾಲಾ ಮಕ್ಕಳು ವಿವಿಧ ಬಗೆಯ ವೇಷ ಭೂಷಣ ಧರಿಸಿ ಜಾಥಾ ಮೆರವಣಿಗೆಗೆ ಮೆರಗು ತಂದು ಕೊಟ್ಟರು. ಮಹಿಳೆಯರು ಕುಂಭಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಸಂಘಟನೆಗಳ ಪ್ರಮುಖರು ಗ್ರಾಮಸ್ಥರು ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯಲ್ಲಿ ಭಾಗಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು. ನಂತರ ಡಾಬಿ.ಆರ್. ಅಂಬೇಡ್ಕರ್ ವೃತ್ತದ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಓದಿದರು. ಅರ್ಜುನ, ವಿಜಯಕುಮಾರ್, ಬಲವಂತ ಸಂವಿದಾನದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಲಿಂಗರಾಜ ಅರಸ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಗಮೇಶ, ವಿವಿಧ ಶಾಲೆಗಳ ಮುಖ್ಯೋಪಾಧ್ಯರು ಮತ್ತು ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.