ಸಂವಿಧಾನ ಜಾಗೃತಿಗೆ ಬೈಕ್ ರ್ಯಾಲಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಫೆ.21; ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾದ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಶನಿವಾರ ಚಾಲನೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸ್ಥಳೀಯ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಹೆಲ್ಮೆಟ್ ಧರಿಸಿ, ಖುದ್ದು ಬೈಕ್ ಚಾಲನೆ ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ,  ಸಂವಿಧಾನ ಜಾಗೃತಿ ಜಾಥಾದ ಬೈಕ್ ರ್ಯಾಲಿಯ ಮುಂಚೂಣಿಯಲ್ಲಿದ್ದು, ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿ ಗಮನ ಸೆಳೆದರು.ಭಾರತದ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ ಜ.26 ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು “ಸಂವಿಧಾನ ಜಾಗೃತಿ ಜಾಥಾ” ಕ್ಕೆ ಚಾಲನೆ ನೀಡಿದ್ದರು.  ಎಲ್‍ಇಡಿ ವಾಹನದೊಂದಿಗೆ ಬುದ್ದ, ಬಸವ, ಅಂಬೇಡ್ಕರ್ ಪುತ್ಥಳಿಯನ್ನು ಒಳಗೊಂಡಿರುವ ವಿಶೇಷ ವಾಹನವು ಜಾಥಾ ಮೂಲಕ ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಎಲ್‍ಇಡಿ ಪರದೆ ಹೊಂದಿರುವ ಸ್ತಬ್ಧಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇದೇ ಫೆ.23 ರವರೆಗೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದ  ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಸಂವಿಧಾನದ ಮೌಲ್ಯ, ಆಶಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.