ಸಂವಿಧಾನ ಗ್ರಂಥ ಶ್ರದ್ಧೆಯಿಂದ ಅಧ್ಯಯನ ಮಾಡಿ-ಮಂಜುಳಾ ಅಸುಂಡಿ

ದೇವದುರ್ಗ.ಡಿ.೦೪- ಭಾರತದ ಸಂವಿಧಾನ ಸರ್ವ ಜನಾಂಗ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುವ ಶ್ರೇಷ್ಠ ಗ್ರಂಥವಾಗಿದೆ. ಇಂತಹ ಮಹಾನ್ ಗ್ರಂಥವನ್ನು ನಾವೆಲ್ಲ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಇದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಾಲೂಕು ಪರಿಶಿಷ್ಡ ವರ್ಗಗಳ ಕಲ್ಯಾಣಧಿಕಾರಿ ಮಂಜುಳಾ ಅಸುಂಡಿ ಹೇಳಿದರು.
ತಾಲೂಕಿನ ಮಸರಕಲ್ ಮೊರಾರ್ಜಿ ವಸತಿ ಶಾಲೆಯಲ್ಲಿ ಸಮತಾ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸಂವಿಧಾನದ ಕಡೆ, ವಿದ್ಯಾರ್ಥಿಗಳ ನಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನದಿಂದ ಬಡವರು, ಶೋಷತರು, ಮಹಿಳೆಯರಿಗೆ ದೊರೆತು ಬದುಕು ಹಸನಗೊಂಡಿದೆ ಎಂದರೆ ಬಾಬಾ ಸಾಹೇಬ ಅಂಬೇಡ್ಕರರ ಚಿಂತನೆಗಳೇ ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನಿಸಬೇಕು. ಪ್ರತಿಯೊಬ್ಬರಿಗೂ ಸಂವಿಧಾನದ ತಿಳುವಳಿಕೆ ಅಗತ್ಯ ಎಂದರು.
ಎಂಆರ್‌ಎಚ್‌ಎಸ್ ಸಂಘಟನೆ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಉಪನ್ಯಾಸ ನೀಡಿ, ವಿದ್ಯಾರ್ಥಿ ಮಟ್ಟದಲ್ಲಿಯೇ ವೈಚಾರಿಕತೆಯ ವಿಚಾರಗಳು, ಸಂದೇಶಗಳ ಅರಿವು ಹಾಗೂ ಅಧ್ಯಯನ ನಡೆದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಕನಸು ನನಸಾಗಲು, ಆಶಯಗಳು ಸಾಕಾರಗೊಳ್ಳಲು ಸಾಧ್ಯ. ದಮನಿತರ ಕಲ್ಯಾಣ, ಮಹಿಳೆಯರಿಗೆ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಸೇರಿ ಹಲವು ಕನಸುಗಳನ್ನು ಇಟ್ಟುಕೊಂಡು ಕನಸುಕಟ್ಟಿಕೊಂಡು ಸಂವಿಧಾನ ಜಾರಿಗೊಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್ ರಂತಹ ಮಹನೀಯರ ಸಂದೇಶಗಳನ್ನು ವೈಚಾರಿಕ ನೆಲಗಟ್ಟಿನ ಮೇಲೆ ಅಧ್ಯಯನ ಮಾಡಬೇಕು. ಸಂವಿಧಾನ ಮೂಲ ಉದ್ದೇಶ ಅರ್ಥೈಸಿಕೊಳ್ಳಬೇಕು. ಮೀಸಲಾತಿಯ ಒಳ ಮರ್ಮದ ಅರಿವು ಮೂಡಿಸಿಕೊಳ್ಳಬೇಕು. ಮೀಸಲಾತಿ ಮತ್ತು ಜಾತಿ ಸೌಲಭ್ಯದಿಂದ ಪಡೆದು ಉನ್ನತ ಪದವಿ ಪಡೆದವರು ತಮ್ಮ ಸಮುದಾಯದ ಕಡೆ ಒಮ್ಮೆ ತಿರುಗಿ ನೋಡಬೇಕಾಗಿದೆ ಎಂದರು.
ಪ್ರಾಚಾರ್ಯ ಶರಣಬಸಯ್ಯ ಹಿರೇಮಠ, ಕಾರ್ಯಕ್ರಮದ ಸಂಚಾಲಕ ಬಸವರಾಜ ಬ್ಯಾಗವಾಟ, ದಲಿತ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ಬಸವರಾಜ ಮೇತ್ರಿ, ಪತ್ರಕರ್ತ ನರಸಿಂಗರಾವ್ ಸರ್ಕಿಲ್, ಸುನಂದ ಕುಮಾರ ಬಳೆ, ಶಿಕ್ಷಕರಾದ ಜಟ್ಟೆಪ್ಪ ಅಣಬಿ, ಶಂಕ್ರಮ್ಮ, ಬಸವರಾಜ, ಶ್ರೀನಿವಾಸ, ಶ್ರೀನಾಥ ಜಟ್ನಾಕ್, ಕವಿತಾ ಇತರರಿದ್ದರು.