ಸಂವಿಧಾನ ಉಳಿವಿಗೆ ಕಡೆ ಹಂತದ ಮತದಾನ

ನವದೆಹಲಿ, ಜೂ. ೧- ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಇಂದು ಲೋಕಸಭೆಗೆ ೭ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಇಂಡಿಯಾ ಮೈತ್ರಿಕೂಟ ತನ್ನ ಎಲ್ಲ ಸಾಮರ್ಥ್ಯದಿಂದ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸುತ್ತಿದ್ದು, ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ೬ ಹಂತಗಳ ಮತದಾನ ಪೂರ್ಣಗೊಂಡಿದ್ದು ಮತದಾರರು ಇಂಡಿಯಾ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸುವುದಾಗಿ ಅವರು ತಿಳಿಸಿದರು.
ಚುನಾವಣೆ ವೇಳೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಹೇಳಿರುವ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಕಾರ್ಮಿಕ ನ್ಯಾಯ ಹಾಗೂ ಸಮನ ನ್ಯಾಯ ಭರವಸೆಗಳಿಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಖರ್ಗೆ ಸರ್ವಾಧಿಕಾರಿ ಶಕ್ತಿಗಳನ್ನು ಪರಾಭವಗೊಳಿಸಿದರೆ ಮಾತ್ರ ಮತ ಹಬ್ಬ ಸಫಲವಾಗಲು ಸಾಧ್ಯ ಎಂದಿದ್ದಾರೆ.
ಸಂವಿಧಾನವಿದ್ದರೆ ಮಾತ್ರ ಮೂಲಭೂತ ಹಕ್ಕುಗಳು ಉಳಿಯಲು ಸಾಧ್ಯ. ದಲಿತರು, ಯುವಕರು, ಕಾರ್ಮಿಕರು, ಮಹಿಳೆಯರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಭವಿಷ್ಯದ ಬಗ್ಗೆ ಯೋಚಿಸಿ ನಿರ್ಧಾರ ಮಾಡುವಂತೆ ಮತದಾರರಿಗೆ ಖರ್ಗೆ ಮನವಿ ಮಾಡಿದ್ದಾರೆ.