ಇಸ್ಲಾಮಾಬಾದ್, ಮಾ.೨೫- ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡುವುದರಿಂದ ನಡೆಯುತ್ತಿರುವ ಸಾಂವಿಧಾನಿಕ ಉಲ್ಲಂಘನೆಗಳ ಬಗ್ಗೆ ನ್ಯಾಯಾಧೀಶರು ಗಮನ ಹರಿಸುವಂತೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.
ಇಂದು ವಿಡಿಯೋ ಲಿಂಕ್ ಮೂಲಕ ಪಿಟಿಐ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಖಾನ್, ಸಾಂವಿಧಾನಿಕ ಉಲ್ಲಂಘನೆಗಳ ಬಗ್ಗೆ ಗಮನ ಹರಿಸುವಂತೆ ನ್ಯಾಯಾಧೀಶರನ್ನು ಕೇಳಿದರು.
ಉಲ್ಲಂಘನೆಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಆಡಳಿತಗಾರರು ಸಂವಿಧಾನದ ಉಲ್ಲಂಘನೆಯನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ. ಕಾನೂನು ಸುವ್ಯವಸ್ಥೆ ರಾಷ್ಟ್ರದ ಮೂಲಭೂತ ಹಕ್ಕು ಎಂದರು.
ಸರ್ಕಾರದ ನಡೆಗಳನ್ನು ನ್ಯಾಯಾಧೀಶರು ಗಮನಿಸಬೇಕು ಎಂದ ಅವರು, ಪಾಕಿಸ್ತಾನವು ನಿರ್ಣಾಯಕ ಹಂತವನ್ನು ಎದುರಿಸುತ್ತಿದೆ.ಆಡಳಿತ ಮಾಫಿಯಾ ಸಂವಿಧಾನದ ಮೇಲೆ ದಾಳಿ ಮಾಡಿದೆ ಎಂದು ಹೇಳಿದರು.
ಅಲ್ಲದೆ, ಪಾಕಿಸ್ತಾನದ ಚುನಾವಣಾ ಆಯೋಗ ಪಂಜಾಬ್ ಉಪಚುನಾವಣೆಗಳನ್ನು ಅಕ್ಟೋಬರ್ ೮ ರವರೆಗೆ ಮುಂದೂಡಿದೆ.
ಈ ಮೊದಲು ಚುನಾವಣೆಯನ್ನು ಏಪ್ರಿಲ್ ೩೦ ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಪಂಜಾಬ್ ಚುನಾವಣಾ ಕಾರ್ಯಕ್ರಮದ ಅಧಿಸೂಚನೆಯನ್ನು ಹಿಂತೆಗೆದುಕೊಂಡು ಪಂಜಾಬ್ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದೆ.