ಸಂವಿಧಾನವನ್ನೂ ಎಲ್ಲರೂ ಗೌರವಿಸಿ

ಭಾಲ್ಕಿ:ಜ.27: ವಿದ್ಯಾರ್ಥಿಗಳು, ಯುವಕರಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸುವ ಅಗತ್ಯತೆ ಇದೆ ಎಂದು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ ಆಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರ. ಸಂವಿಧಾನದಲ್ಲಿ ಎಲ್ಲ ವರ್ಗ, ಸಮುದಾಯಕ್ಕೂ ಸಮಾನತೆ ಕಲ್ಪಿಸಲಾಗಿದೆ.
ಇಂತಹ ಶ್ರೇಷ್ಠ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ವಿದ್ಯಾರ್ಥಿಗಳು, ಯುವಕರು ತಮ್ಮ ಓದಿನ ಜತೆಗೆ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಇತಿಹಾಸ, ಸಂವಿಧಾನದ ಆಶಯ ತಿಳಿದು ಕೊಂಡು ದೇಶಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಸಂಗನ್, ನಗರ ಪೆÇಲೀಸ್ ಠಾಣೆ ಸಿಪಿಐ ಬಿ.ಅಮರೇಶ, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್ ಸೇರಿದಂತೆ ಹಲವರು ಇದ್ದರು.
ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ ಹುಸೇನ ವಂದಿಸಿದರು.
ಶಿಷ್ಟಾಚಾರ ಪಾಲಿಸಿದ್ರು ಗಣ್ಯರ ಗೈರು, ತಾಲೂಕು ಆಡಳಿತದ ವತಿಯಿಂದ ನಡೆದ ಗಣ್ಯರಾಜ್ಯೋತ್ಸವ ಸಮಾರಂಭದಲ್ಲಿ ಗಣ್ಯರು ಗೈರಾಗಿದ್ದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಯಿತು.
ಜಿಲ್ಲಾಡಳಿತದ ನಿದರ್ಶನದ ಮೇರೆಗೆ ತಾಲೂಕು ಆಡಳಿತ ಶಿಷ್ಟಾಚಾರ ಪಾಲಿಸಿ ಆಮಂತ್ರಣ ಪತ್ರಿಕೆ ಮುದ್ರಿಸಿತು.
ಆದರೆ, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿದ ಎಲ್ಲರೂ ಗೈರು ಆಗಿದ್ದು ಅಚ್ಚರಿ ಮೂಡಿಸಿತು. ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬೀದರ್‍ನಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು. ಹಾಗಾಗಿ ಅವರು ಸ್ಥಳೀಯವಾಗಿ ನಡೆದ ಗಣರಾಜ್ಯೋತ್ಸವದಲ್ಲಿ ಇರಲಿಲ್ಲ.
ಉಳಿದಂತೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿದ್ದ ಕೇಂದ್ರದ ಸಚಿವ ಭಗವಂತ ಖೂಬಾ, ಪೌರಾಡಳಿತ ಸಚಿವ ರಹೀಂಖಾನ್, ವಿಧಾನ ಪರಿಷತ್ತು ಸದಸ್ಯರಾದ ರಘುನಾಥ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್ ಮತ್ತು ಶಶೀಲ ನಮೋಶಿ ಗೈರಾಗಿದ್ದರು.