ಸಂವಿಧಾನವನ್ನು ದೇಶದ ಪವಿತ್ರ ಗ್ರಂಥವನ್ನಾಗಿ ಪೂಜಿಸಬೇಕು

ಸಂಜೆವಾಣಿ ವಾರ್ತೆ
ಹನೂರು ಫೆ 8 :- ಡಾ|| ಬಿಅರ್ ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನವನ್ನು ದೇಶದ ಪವಿತ್ರ ಗ್ರಂಥವನ್ನಾಗಿ ಪೂಜಿಸಬೇಕು. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನಾವೆಲ್ಲರೂ ಅರಿತು ಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಅವರು ತಿಳಿಸಿದರು.ಹನೂರು ಪಟ್ಟಣ ಪಂಚಾಯತಿ ಹಾಗೂ ತಾಲ್ಲೂಕು ಆಡಳಿತ ಮಂಡಳಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತ ಜಾಥಾ ಕಾರ್ಯಕ್ರಮವನ್ನೂ ಉದ್ಘಾಟಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಗೌರವ ಸಲ್ಲಿಸಿ ನಂತರ ಮಾತನಾಡಿದರು. ಪ್ರತಿ ಮನೆ ಮನೆಯಲ್ಲೂ ಸಂವಿಧಾನದ ಆಶಯಗಳು ಹಾಗೂ ಕರ್ತವ್ಯಗಳನ್ನು ನಾವೆಲ್ಲರೂ ಪಾಲಿಸಬೇಕು ಈ ನಿಟ್ಟಿನಲ್ಲಿ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಯುವಕರಲ್ಲಿ ಬಾಬಾ ಸಾಹೇಬ್ ಅವರ ಚರಿತ್ರೆ ಹಾಗೂ ಮಹನೀಯರ ತತ್ವ ಆದರ್ಶ ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರ ವನ್ನು ಬಹಳ ಆತ್ಮೀಯವಾಗಿ ಬರ ಮಾಡಿಕೊಂಡು ಅರ್ಥ ಪೂರ್ಣವಾಗಿ ಸಂಭ್ರಮ ಸಡಗರದಿಂದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಮಾಡಲಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಆರ್ ಎಸ್ ದೊಡ್ಡಿ ಗ್ರಾಮದ ಬಳಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ಎಂ ಆರ್, ಮಂಜುನಾಥ್ ಹಾಗೂ ತಹಸೀಲ್ದಾರ್ ಗುರುಪ್ರಸಾದ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ವಾದ್ಯ ಮೇಳ, ಡೊಳ್ಳು ಕುಣಿತ ದೊಂದಿಗೆ ಸಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಲೋಕ್ಕನಹಳ್ಳಿ ಮುಖ್ಯ ರಸ್ತೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು. ವಾದ್ಯ ಸದ್ದಿಗೆ ಯುವಕರು ಜೈಭೀಮ್ ಎಂದು ಘೋಷಗಳನ್ನು ಕೂಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜೈಕಾರ ಹಾಕಿದರು. ನೆರದಿದ್ದವರು ನಿಬ್ಬೆರಾಗಾಗುವಂತೆ ಪಟ್ಟಣದಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದು ವಿಶೇಷ ವಾಗಿತ್ತು ಇನ್ನೂ ಪಟ್ಟಣದ ಪ್ರಮುಖ ರಸ್ತೆ ಗಳಲ್ಲಿ ನೀಲಿ ಬಾವುಟ ರಾರಾಜಿಸುತ್ತಿದ್ದವು.
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಗಳು ಸಹ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಟ್ಟಣ ಪಂ. ಮುಖ್ಯಾಧಿಕಾರಿ ಮಹೇಶ್ ಕುಮಾರ್, ಬಿಇಒ ಶಿವರಾಜು, ಪಟ್ಟಣ ಪಂ. ಸದಸ್ಯರುಗಳು ಹಾಗೂ ಯಜಮಾನರುಗಳಾದ ಲಿಂಗರಾಜು, ಸಿದ್ದರಾಜು, ಆರ್, ಮಹದೇವ, ಮುಖಂಡರುಗಳಾದ ಸಿದ್ದರಾಜು, ದಲಿತ್, ಚಿಕ್ಕ ಮಾದಯ್ಯ, ಹಾಗೂ ದಲಿತ ಸಮುದಾಯದ ಮುಖಂಡರುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.