ಸಂವಿಧಾನದ ರಕ್ಷಣೆ ದೇಶ ವಾಸಿಗಳ ಹೊಣೆ: ಎಚ್‍ಸಿಎಂ

ತಿ.ನರಸೀಪುರ: ಜೂ.26:- ದೇಶ ವಾಸಿಗಳ ಏಳಿಗೆ, ಸಮಾನತೆ, ಸಹೋದರತೆ, ಐಕ್ಯತೆಯ ಆಶಯಗಳನ್ನು ಹೊತ್ತ ಸಂವಿಧಾನ ಈ ದೇಶದ ಎಲ್ಲ ನಾಗರಿಕರ ಅಸ್ತಿ.ಹಾಗಾಗಿ ಸಂವಿಧಾನ ರಕ್ಷಣೆ ಮಾಡುವ ಹೊಣೆ ದೇಶದ ಎಲ್ಲ ವಾಸಿಗಳ ಮೇಲಿದೆ ಎಂದು ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ತಾಲೂಕಿನ ತಲಕಾಡು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ದೇಶದಲ್ಲಿ ಶತಶತಮಾನಗಳಿಂದ ನಡೆಯುತ್ತಿದ್ದ ಗುಲಾಮಗಿರಿ,ಶೋಷಣೆ,ಅಸಹಿಷ್ಣುತೆ,ಜಾತಿವಾದಗಳನ್ನು ಹೋಗಲಾಡಿಸಲು 1950ರಲ್ಲಿ ನಿಮ್ನ ಸಂವಿಧಾನವನ್ನು ದೇಶಕ್ಕೆ ಅಳವಡಿಸಿಕೊಳ್ಳಲಾಯಿತು.ಸಂವಿಧಾನದಲ್ಲಿ ಎಲ್ಲ ಧರ್ಮ ಮತ್ತು ಸಮುದಾಯಗಳು ಸಮಾನ ಎಂದು ಬಿಂಬಿಸಲಾಗಿದೆ.ಆದರೆ,ಬಿಜೆಪಿ ಪಕ್ಷ ಜಾತಿ,ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿತ್ತು.ಅಲ್ಲದೆ ಬಿಜೆಪಿ ಸರ್ಕಾರ ಜನಪರವಾದ ಕೆಲಸ ಮಾಡಲಿಲ್ಲ,ಜೆಡಿಎಸ್ ಕೂಡ ರಾಜ್ಯದ ಜನತೆಯ ಅಭಿಲಾಷೆಯನ್ನು ತಿಳಿಯಲು ಇಚ್ಚಿಸಲಿಲ್ಲ.ಹಾಗಾಗಿ ಪ್ರಜ್ಞಾವಂತ ದೇಶ ವಾಸಿಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಪಟ್ಟ ಬಿಜೆಪಿ ಪಕ್ಷಕ್ಕೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದರು ಎಂದರು.
ಜನರ ಕೆಲಸ ಮಾಡಲು ರಾಜಕೀಯ ಪಕ್ಷಗಳಿಗೆ ಬದ್ಧತೆ ಮತ್ತು ಇಚ್ಛಾಶಕ್ತಿ ಬೇಕು.ಇದು ನನಗೆ ನಲವತ್ತು ವರ್ಷಗಳಿಂದಲೂ ಕ್ಷೇತ್ರದ ಜನತೆ ಕೊಟ್ಟ ಕೊಡುಗೆ.ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಸಮಸ್ತ ಜನತೆಗೆ ಅಭಿನಂದನೆ.ಹಲವು ಭಿನ್ನಾಭಿಪ್ರಾಯಗಳು ಇದ್ದರೂ ಎಲ್ಲರು ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೀರಿ.ತಲಕಾಡು ಭಾಗದ ಜನತೆಯ ಅಭೂತಪೂರ್ವ ಬೆಂಬಲ ನನಗೆ ಅಚ್ಚರಿ ತಂದಿದೆ.ಕಳೆದ ಬಾರಿ ಸ್ವಲ್ಪ ಮೈಮರೆತದಿದ್ದರಿಂದ ನಾನು ಪರಾಭವಗೊಳ್ಳಬೇಕಾಯಿತು.ಮಾಧವ ಮಂತ್ರಿ ಆಣೆಕಟ್ಟು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ತಾಲೂಕಿನ ಸಮಗ್ರ ಅಭಿವೃದ್ಧಿ ನನ್ನ ಕನಸು.ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಖುದ್ದು ಚರ್ಚೆ ನಡೆಸಿದ್ದು,ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆಯಾಯ ಕ್ಷೇತ್ರದ ಶಾಸಕರ ಜೊತೆ ಸಮನ್ವಯತೆ ಸಾಧಿಸಲಾಗುವುದು ಎಂದರು.
ಕ್ಷೇತ್ರದ ಎಲ್ಲ ಗಣ್ಯರು ಮತ್ತು ಸಾಮಾನ್ಯ ವ್ಯಕ್ತಿಗಳು ನನಗೆ ಸಮಾನರು.ದಲಿತ,ಹಿಂದುಳಿದ,ಅಲ್ಪಸಂಖ್ಯಾತ ವರ್ಗಗಳ ನ್ನು ಆರ್ಥಿಕ ,ರಾಜಕೀಯ ,ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮೇಲೆತ್ತುವುದು ಕಾಂಗ್ರೆಸ್ ಪಕ್ಷದ ಧ್ಯೇಯ.ಕ್ಷೇತ್ರದಲ್ಲಿ ಕೆ.ಎಸ್.ಆರ್.ಟಿ .ಸಿ ಡಿಪೆÇೀ ನಿರ್ಮಾಣ ಮಾಡಲು ಇಲಾಖೆಯ ಅಧಿಕಾರಗಳ ಜೊತೆ ಮಾತುಕತೆ ನಡೆಸಲಾಗಿದೆ.ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರಲಿವೆ.ರಾಜ್ಯದ 30 ಇಲಾಖೆಗಳು ಸಮಾಜ ಕಲ್ಯಾಣ ಇಲಾಖೆ ಅಡಿ ಬರುತ್ತವೆ.ಹಾಗಾಗಿ ಎಲ್ಲ ಇಲಾಖೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮುಖೇನ ಕೆಲಸ ಮಾಡಿಸಲು ತಾವು ಸಿದ್ದವಿರುವುದಾಗಿ ಅವರು ತಿಳಿಸಿದರು.
ಈ ಚುನಾವಣೆಯಲ್ಲಿ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮಾಡಿದ್ದಾರೆ.ಕ್ಷೇತ್ರದ ಅಭಿವೃದ್ಧಿ ದೃಷ್ಟಿಕೋನದಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ನನ್ನನ್ನು ಗೆಲ್ಲಿಸಿದ್ದಾರೆ.
ತಲಕಾಡು ಗ್ರಾಮವನ್ನು ಮಾದರಿ ಪ್ರವಾಸಿ ತಾಣವಾಗಿ ಮಾಡಬೇಕು.ತಲಕಾಡು ಗ್ರಾಮ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾದಂತೆ ಇಲ್ಲಿನ ಜನರ ಆರ್ಥಿಕ ಶಕ್ತಿ ,ಜನಜೀವನ ವ್ಯವಸ್ಥೆ ಪುನಶ್ಚೇತಗೊಳ್ಳಲಿದೆ.ಹಾಗಾಗಿ ತಲಕಾಡು ಗ್ರಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದು ನನ್ನ ಹೊಣೆ.ತಾಲೂಕಿನಲ್ಲಿರುವ
ಏತ ನೀರಾವರಿ ದುರಸ್ತಿ ಕೆಲಸವನ್ನು ತುರ್ತು ಪೂರ್ಣಗೊಳಿಸಬೇಕು.ಜನರ ಬೇಸಾಯಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಬೇಕು ಎಂದರು.
ಜನಪರವಾದ ಅಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿರಬೇಕು.ಜನಪರವಾಗಿ ಇಲ್ಲದ ಅಧಿಕಾರಿಗಳು ನಮಗೆ ಬೇಕಿಲ್ಲ.ನಾನು ಯಾವುದೇ ಅಧಿಕಾರಿಗಳ ಮರ್ಜಿಗೆ ಒಳಗಾಗುವುದಿಲ್ಲ.ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಕ್ಷೇತ್ರದಲ್ಲಿ ಅಧಿಕಾರಿಗಳ ಮುಖೇನ ಕೆಲಸವನ್ನು ಮಾಡಿಸಬೇಕು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ,ಜನವಿರೋಧಿ ಆಡಳಿತವೇ ಮುಖ್ಯ ಕಾರಣ ಎಂದರು
ಮಾಜಿ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಸುನಿಲ್ ಬೋಸ್ ಮಾತನಾಡಿ,ಈ ಚುನಾವಣೆಯಲ್ಲಿ ಹಗಲು -ಇರುಳು ದುಡಿದಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿದರು.ಕಾಂಗ್ರೆಸ್ ಪಕ್ಷದಲ್ಲಿದ್ದ ವ್ಯಕ್ತಿಯೊಬ್ಬ ನಮ್ಮನ್ನು ಸೋಲಿಸಲು ಪಿತೂರಿ ಮಾಡಿದ್ದರು.ಜನರ ಶಕ್ತಿ ಮುಂದೆ ಅವರ ಆಟ ನಡೆಯಲಿಲ್ಲ.ತಲಕಾಡಿನ ಆಟೋ ಚಾಲಕರು,ನಿಸರ್ಗಧಾಮದಲ್ಲಿರುವ ಹೋಟೆಲ್ ಮಾಲೀಕರು ನಮಗೆ ಭರವಸೆ ನೀಡಿ ಬೆಂಬಲಿದ್ದಾರೆ.ತಲಕಾಡು-ಹಳೇಬೀದಿ ಮುಖ್ಯರಸ್ತೆಯನ್ನು ಬೇಗ ಪೂರ್ಣಗೊಳಿಸಬೇಕು. ನಿಸರ್ಗಧಾಮದಲ್ಲಿ ಅಂಗಡಿ ನಡೆಸುತ್ತಿರುವ ಕಾರ್ಮಿಕರು ಒಳಿತಿಗಾಗಿ ಸೂಕ್ತಕ್ರಮ ಕ್ರಮಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಅಧಿಕಾರಿಗಳು ಜನತೆಯನ್ನು ಕೆಲಸಕ್ಕಾಗಿ ಅಲೆಸುವುದನ್ನು ಬಿಡಬೇಕು.ಸಾರ್ವಜನಿಕರ ಕೆಲಸವನ್ನು ಅಧಿಕಾರಿಗಳು ಖುದ್ದು ಮಾಡಬೇಕು.ಕ್ಷೇತ್ರದ ಜನತೆಯ ಪ್ರೀತಿ,ಬೆಂಬಲಕ್ಕೆ ನಾನು ಚಿರಋಣಿ.ತಲಕಾಡು ಅಭಿವೃದ್ಧಿಗೆ ಹೆಚ್ಚುಶ್ರಮವಹಿಸಲಾಗುವುದು.ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಈಡೇರಿಸುತ್ತದೆ.ರಾಜ್ಯದ ಎಲ್ಲ ಜನತೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ .ಬಸವರಾಜು, ಮಾಜಿ ಜಿಪಂ ಸದಸ್ಯರಾದ ಕಲಿಯೂರು ಚಂದ್ರಶೇಖರ್,ಹೊನ್ನ ನಾಯಕ,ಮೈಸೂರು ಮೈಮೂಲ್ ನಿರ್ದೇಶಕ ಆರ್. ಚೆಲುವರಾಜು, ಜಿಲ್ಲಾ ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೊಸಪುರ ಕೆ.ಮಲ್ಲು ,,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ವತಮ್ಮ, ವೀಣಾ, ಮಾಜಿ ಪುರಸಭಾ ಅಧ್ಯಕ್ಷ ಪದ್ಮನಾಭ, ಹೆಮ್ಮಿಗೆ ಶೇಷಾದ್ರಿ,ಡಾ.ಜ್ಞಾನಪ್ರಕಾಶ್, ತಲಕಾಡು ಗ್ರಾಪಂ ಅಧ್ಯಕ್ಷ ಕೆಂಪಯ್ಯ, ಬೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜು,ಮಾಜಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ,ಅಕ್ಕೂರು ಗುರುಮೂರ್ತಿ,ಮಾಜಿ ತಾಪಂ ಸದಸ್ಯರುಗಳಾದ ಪ್ರಸನ್ನ, ಕುಕ್ಕೂರು ಗಣೇಶ್, ರಾಮಲಿಂಗಯ್ಯ,ತಲಕಾಡು ನರಸಿಂಹಮಾದನಾಯಕ,ಎಚ್.ಸಿ.ಎಂ. ಅಭಿಮಾನಿ ಬಳಗದ ಅಧ್ಯಕ್ಷ ತಲಕಾಡು ನಾಗರಾಜು ,ಕಲಿಯೂರು ಶಿವಣ್ಣ,ವಿಜಯಪುರ ಶಿವಶಂಕರ,ತಲಕಾಡು ಸುಂದ್ರ,ಎಚ್.ರಾಜಣ್ಣ, ಮಹೇಂದ್ರ,ಕೋಕಿಲ, ಮಲ್ಲಾಜಮ್ಮ,ಕಲಿಯೂರು ವೆಂಕಟೇಶ್, ಸಿದ್ದರಾಜು, ಸಿದ್ದೇಗೌಡ, ದೈಹಿಕ ಶಿಕ್ಷಕ ತಿರುಮಲ್ಲೇಶ್, ಕುಕ್ಕೂರು ಮಹೇಶ್ ಇತರರು ಹಾಜರಿದ್ದರು.