ಸಂವಿಧಾನದ ಮಹತ್ವವನ್ನು ಸಾರ್ವಜನಿಕರು ಅರಿಯಲು ಕರೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಫೆ.17; ಭಾರತ ಇಡೀ ಪ್ರಪಂಚದಲ್ಲಿ ಬೃಹತ್ ಸಂವಿಧಾನ ಹೊಂದಿರುವ ರಾಷ್ಟ್ರ ಎಂದು ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ವಿಜಯಕುಮಾರ್ ಹೇಳಿದರು.
ತಾಲೂಕಿನ ಹಿರೇಮೇಗಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮೇಗಳಗೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಸಮಾಜ ಕಲ್ಯಾಣ  ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿದ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ವಿಜಯನಗರ ಜಿಲ್ಲಾದ್ಯಂತ ಈ ಸಂವಿಧಾನ ಜಾಗೃತಿ ಜಾಥಾದ ವಾಹನ ಸಂಚರಿಸಲಿದ್ದು, ಹರಪನಹಳ್ಳಿ ತಾಲೂಕಿಗೆ ಇದೇ ಫೆ.12ಕ್ಕೆ ಆಗಮಿಸಿದೆ. ಹರಪನಹಳ್ಳಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅದ್ದೂರಿಯಾಗಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆದಿದೆ. ಅದೇ ರೀತಿ ಹಿರೇಮೇಗಳಗೆರೆ ಗ್ರಾಮದಲ್ಲೂ ಬಹಳ ಅರ್ಥಪೂರ್ಣವಾಗಿ, ಜನ ಹಾಗೂ ಮನಗಳಿಗೆ ಸಂದೇಶ ಮುಟ್ಟುವಂತೆ ಸಂವಿಧಾನ ಮಹತ್ವ ಸಾರಲು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇದ್ದ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಧಾರ್ಮಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾನಾ ತೊಡುಕುಗಳು ಇದ್ದವು. ಆದರೆ, ಸ್ವಾತಂತ್ರ್ಯ ಬಂದ ನಂತರ ಸಾಕಷ್ಟು ವಿಷಯಗಳು ಸುಧಾರಿಸಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹಲವು ದೇಶಗಳನ್ನು ಸುತ್ತಿ, ಅಲ್ಲಿನ ಸಂವಿಧಾನಗಳನ್ನು ಓದಿ, ಪರಿಶೀಲಿಸಿ ಈ ದೇಶಕ್ಕೆ ಅನುಗುಣವಾಗಿ ಸಂವಿಧಾನ ರಚಿಸಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ರೇಖಾ ಕರಿಬಸಪ್ಪ, ಗ್ರಾಪಂನ ಎಲ್ಲ ಸದಸ್ಯರು, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಗ್ರಾಪಂ ಸಿಬ್ಬಂದಿ, ವಿವಿಧ ಕನ್ನಡಪರ, ದಲಿತ ಪರ ಸಂಘಟನೆಗಳ ಮುಖಂಡರು, ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಕಲಾ ತಂಡಗಳು, ಊರಿನ ಗ್ರಾಮಸ್ಥರು ಹಾಜರಿದ್ದರು.