ಸಂವಿಧಾನದ ಪ್ರಸ್ತಾವನೆ ಮಾನವೀಯ ಮೌಲ್ಯಗಳ ಪ್ರತಿಬಿಂಬ- ರಮೇಶಬಾಬು ಯಾಳಗಿ

ಮಾನ್ವಿ,ಸೆ.೧೫- ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ತತ್ವಗಳು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ಪಟ್ಟಣದ ಕಲ್ಮಠ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸಂವಿಧಾನ ಪೀಠಿಕಾ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿಯೊಬ್ಬರೂ ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡು ಭಾರತದ ಪ್ರಜಾಪ್ರಭುತ್ವವನ್ನು ಬಲವರ್ಧನೆಗೊಳಿಸಬೇಕು, ಪ್ರಸ್ತಾವನೆಯ ಆಶಯ ಸರ್ವರ ಆಶಯವಾಗಬೇಕು. ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸೋದರತ್ವ, ಸಹಬಾಳ್ವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾದ ಅಗತ್ಯವಿದೆ ಎಂದು ಯಾಳಗಿ ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಸ್ .ಎಸ್. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು.
ಕಲ್ಮಠ ಪದವಿ ಕಾಲೇಜಿನ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್ ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಉಪನ್ಯಾಸಕರು, ಸಕಲ ಸಿಬ್ಬಂದಿ ವರ್ಗ, ವಿದ್ಯಾರ್ಥಿವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಉಪನ್ಯಾಸಕ ಆನಂದಕುಮಾರ ಕಾರ್ಯಕ್ರಮ ನಿರೂಪಿಸಿದರು.