ಸಂವಿಧಾನದ ಪೀಠಿಕೆಗೆ ಅರ್ಥ ಬರುವಂತೆ ನಡೆದುಕೊಳ್ಳಬೇಕು : ನ್ಯಾ.ಮಲ್ಲಿಕಾರ್ಜುನ ಗೌಡ

ಶಿವಮೊಗ್ಗ ಸೆ.22; ನಮ್ಮ ಸಂವಿಧಾನದ ಪೀಠಿಕೆಗೆ ಅರ್ಥ ಬರುವಂತೆ ನಾವೆಲ್ಲಾ ನಡೆದುಕೊಂಡಾಗ ಸಂವಿಧಾನ ರಚನೆಕಾರರ ಕನಸು ನನಸಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಹೇಳಿದರು.ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಅರೆಕಾಲಿಕ ಸ್ವಯಂ ಸೇವಕರಿಗೆ ಏರ್ಪಡಿಸಲಾಗಿದ್ದ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.12 ನೇ ಶತಮಾನದಲ್ಲಿ ಬಸವಣ್ಣನವರು ಅಂದು ಪ್ರಚಲಿತದಲ್ಲಿದ್ದ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದಲ್ಲಿ ಸಮಾನತೆ ತರಲು ಸಾಕಷ್ಟು ಪ್ರಯತ್ನ ಪಟ್ಟರು. ವಚನಗಳ ಮೂಲಕ ಮನುಕುಲದ ತಿರುಳನ್ನು ಸಾರುವ ಮೂಲಕ ವಚನ ಕ್ರಾಂತಿ ಮತ್ತು ಸಮಾನತೆ ತರಲು ಕಲ್ಯಾಣ ಕ್ರಾಂತಿ ಮಾಡಿದರು. ಅದೇ ಸಮಾನತೆಯ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್‍ರವರು ಸಾಕಷ್ಟು ಅಧ್ಯಯನ ಮಾಡಿ ನಮ್ಮ ಸಂವಿಧಾನ ರಚಿಸಿದ್ದಾರೆ. ಅದರ ಪೀಠಿಕೆ ಇಡೀ ಸಂವಿಧಾನದ ಧ್ಯೇಯೋದ್ದೇಶ ಮತ್ತು ಆಶೋತ್ತರಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತದೆ. ಈ ಪೀಠಿಕೆಯಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂದರು.