ಸಂವಿಧಾನದ ಜೊತೆಗೆ ಸಾಹಿತ್ಯದ ಕೃಷಿಗೈದ ಡಾ. ಅಂಬೇಡ್ಕರ್: ನ್ಯಾಯವಾದಿ ಅಂಕಲಗಿ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.15: ಅರ್ಥಶಾಸ್ತ್ರಜ್ಞ ಕಾನೂನು ತಜ್ಞರಾಗಿದ್ದ ಅಂಬೇಡ್ಕರ್ ಜಗತ್ತಿಗೆ ಬೆಳಕನ್ನು ನೀಡುವ ಸಂವಿಧಾನ ರಚಿಸುವದರ ಜೊತೆಗೆ ಶ್ರೇಷ್ಠ ಸಾಹಿತ್ಯವನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರರ ಜನ್ಮದಿನಾಚರಣೆಯನ್ನು ಉದ್ಘಾಟಸಿ ಮಾತನಾಡಿದ ಅವರು, ರೂಪಾಯಿ ಸಮಸ್ಯೆ,ಜಾತಿಯ ನಿರ್ಮೂಲನೆ, ಪಾಕಿಸ್ತಾನ ಮತ್ತು ಭಾರತ ವಿಭಜನೆ, ಶೂದ್ರರು ಯಾರು ಹಾಗೂ ಬುದ್ಧ ಅವನ ಧಮ್ಮಗಳಂತಹ ಶ್ರೇಷ್ಠ ಕೃತಿಗಳನ್ನು ರಚಿಸಿದ ಅಂಬೇಡ್ಕರ್ ಅವರ ಸಾಹಿತ್ಯ ಕೃಷಿ ಜಗತ್ತಿಗೆ ಮಾದರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿμÉೀಕ ಚಕ್ರವರ್ತಿ ಮಾತನಾಡಿ, ಅಂಬೇಡ್ಕರ್ ಅವರನ್ನು ಓದಿದರೆ ಹೊಸ ಜಗತ್ತಿಗೆ ಪ್ರವೇಶಿಸಿದಂತೆ. ಸಮಾನತೆ ಹಾಗೂ ಮಹಿಳಾ ಹಕ್ಕುಗಳನ್ನು ನೀಡಿ ಈ ದೇಶದ ಹಣೆಬರಹವನ್ನು ಬದಲಾಯಿಸಿದರು. ಬಹುಧರ್ಮಿಯ ದೇಶವಾದ ಭಾರತಕ್ಕೆ ಲಿಖಿತ ಸಂವಿಧಾನವನ್ನು ನೀಡಿ ಸಂವಿಧಾನ ಶಿಲ್ಪಿ ಆದರು ಎಂದರು.
ಕು. ಅನ್ನಪೂರ್ಣ ಬೆಳ್ಳೆನ್ನವರ ಉಪನ್ಯಾಸ ನೀಡಿ, ಡಾ. ಅಂಬೇಡ್ಕರವರು ಪ್ರಜಾಪ್ರಭುತ್ವದ ರೂವಾರಿಗಳು. ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಪ್ರತಿಯೊಬ್ಬ ಪ್ರಜೆಗೂ ಘನತೆ ಗೌರವಗಳಿಂದ ಬದುಕುವ ಹಕ್ಕುಗಳನ್ನು ನೀಡಿದರು. ಬುದ್ದನ ಪ್ರತಿರೂಪವೇ ಡಾ.ಅಂಬೇಡ್ಕರ್ ಎಂದರು.
ಆಹೇರಿಯ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ಮಾದರ ಉಪನ್ಯಾಸ ನೀಡಿ, ಮೂಕನಾಯಕ, ಬಹಿಷ್ಕøತ ಭಾರತ,ಸಮತಾ, ಪ್ರಬುದ್ಧ ಭಾರತ ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನಸಾಮಾನ್ಯರಲ್ಲಿ ಶಿಕ್ಷಣ ಮತ್ತು ಸಮಾಜ ಸುಧಾರಣೆ ಬಗ್ಗೆ ಜಾಗೃತಿಯನ್ನುಂಟು ಮಾಡಿದರು. ವಿಶ್ವವೇ ಪ್ರೀತಿಸುವ ಬುದ್ಧನ ಸಂದೇಶಗಳನ್ನು ಅಪ್ಪಿಕೊಂಡರು ಎಂದರು
ದಿವ್ಯ ಸಾನ್ನಿಧ್ಯ ವಹಿಸಿದ ಕನ್ನೂರ ಗುರುಮಠದ ಪೂಜ್ಯ ಸೋಮನಾಥ ಶಿವಾಚಾರ್ಯರು ಡಾ. ಅಂಬೇಡ್ಕರರ ಹೋರಾಟದ ಹಾದಿ ಹಾಗೂ ಸಂಘರ್ಷದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಶಿಲ್ಪಾ ಭಸ್ಮೆ ಅಂಬೇಡ್ಕರ್ ಅವರ ಕುರಿತು ಕಾವ್ಯ ವಾಚನ ಮಾಡಿದರು. ಶರಣ ಚಿಂತಕ ಮೆಹತಾಬ ಕಾಗವಾಡ ತತ್ವಪದಗಳನ್ನು ಹಾಡಿದರು. ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ ನಾವಿ ವಿದ್ಯಾರ್ಥಿಯನ್ನು ಪರಿಷತ್ತು ಸನ್ಮಾನಿಸಿ ಗೌರವಿಸಿತು.
ವೇದಿಕೆಯ ಮೇಲೆ ರವಿ ಕಿತ್ತೂರ, ನೀಲಾ ಜತ್ತಿ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ. ಸಂಗಮೇಶ ಮೇತ್ರಿ ಉಪಸ್ಥಿತರಿದ್ದರು.
ಸುಭಾಷ ಕನ್ನೂರ ಸ್ವಾಗತಿಸಿದರು, ಪ್ರಾಧ್ಯಾಪಕ ಸತ್ಯಣ್ಣ ಹಡಪದ ನಿರೂಪಿಸಿದರು. ಶಿಕ್ಷಕಿ ಶ್ರೀದೇವಿ ಕನ್ನೂರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವತಿ ಅಂಕಲಗಿ, ವಿಜಯಲಕ್ಷ್ಮಿ ಹಳಕಟ್ಟಿ, ಮಹಾದೇವಿ ತೆಲಗಿ, ಶಿಲ್ಪಾ ಹಂಜಿ, ಅಣ್ಣುಗೌಡ ಬಿರಾದಾರ, ರಾಜು ಕಂಬಾಗಿ, ಗಂಗಮ್ಮ ರೆಡ್ಡಿ, ಲಕ್ಷ್ಮಿ ಬಿರಾದಾರ, ರಾಜೇಸಾಬ ಶಿವನಗುತ್ತಿ, ಕೆ.ಕೆ. ಬನ್ನೆಟ್ಟಿ, ಎಸ್.ಎಚ್. ಹೂಗಾರ, ಶೋಭಾ ಬಡಿಗೇರ, ಪರಶುರಾಮ ಚಲವಾದಿ, ವಿಠ್ಠಲ ಕಾಸಿದ ಮುಂತಾದವರು ಉಪಸ್ಥಿತರಿದ್ದರು.