ಸಂವಿಧಾನದ ಆಶೋತ್ತರಗಳ ಆಚರಣೆ ನಿತ್ಯೋತ್ಸವ ಆಗಲಿ:

ಚಿತ್ರದುರ್ಗ, ಜ.26; ಯುವಕರಲ್ಲಿ ದೇಶ ಪ್ರೇಮ ಬೆಳೆಸಲು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು, ಸಂವಿಧಾನದ ಆಶೋತ್ತರಗಳ ಆಚರಣೆ ನಿತ್ಯೋತ್ಸವ ಆಗಬೇಕು. ಗಣರಾಜ್ಯೋತ್ಸವ ಹಬ್ಬ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
 ಜಿಲ್ಲಾಡಳಿತದ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ 72ನೇ ಭಾರತ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು.
 ಶಿಕ್ಷಣ, ಕೈಗಾರಿಕೆ, ಕೃಷಿ-ವಿಜ್ಞಾನ, ಐಟಿ-ಬಿಟಿ, ಬಡವರ ಕಲ್ಯಾಣ, ಸಾಮಾಜಿಕ ನ್ಯಾಯ, ಆರ್ಥಿಕತೆಗೆ ಆದ್ಯತೆ ನೀಡುವ ಮೂಲಕ ರಾಜ್ಯ-ರಾಷ್ಟ್ರವನ್ನು ಶ್ರೇಷ್ಠ ಶಕ್ತಿಯನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
 ಸಂವಿಧಾನದ ಬಲದಿಂದಲೇ ಇಂದು ನಮ್ಮ ದೇಶ ಜಗತ್ತಿನ ಸುಭದ್ರ ಆರ್ಥಿಕತೆಗಳಲ್ಲಿ ಒಂದಾಗಿರುವುದು ಅಭಿವೃದ್ಧಿಯ ಸಂಕೇತವಾಗಿದೆ. ಸರ್ಕಾರದ ಬಾಗಿಲಿಗೆ ಜನಸಾಮಾನ್ಯ ಬರಬಾರದು, ಜನಸಾಮಾನ್ಯರ ಬಾಗಿಲಿಗೆ ಸರ್ಕಾರ ಹೋಗಬೇಕು. ಪ್ರತಿ ಹಳ್ಳಿಯು ಅಭಿವೃದ್ಧಿಯ ಕತೆ ಹೇಳಬೇಕು ಎಂಬುದು ನಮ್ಮ ಸಂವಿಧಾನದ ಆಶಯವಾಗಿದೆ ಎಂದರು.
ಗಣರಾಜ್ಯೋತ್ಸವ ಜನರ ಉತ್ಸವ: ಗಣರಾಜ್ಯೋತ್ಸವ ಎಂದರೆ ಜನರ ಉತ್ಸವವಾಗಿದೆ. ಜನ ಸಾಮಾನ್ಯರಿಂದಲೇ ದೇಶ ನಿರ್ಮಾಣ ಇದೇ ಗಣರಾಜ್ಯ ದಿನದ ವೈಶಿಷ್ಟ್ಯವಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದ ಉದಾಹರಣೆಗಳು ಹೆಮ್ಮೆ ತರುವಂತಹದ್ದು. ಜನಸಾಮಾನ್ಯರಿಗೆ ಸೂರು ಕೊಡೋ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ತಮ್ಮ ಉತ್ತಮ ಮನೆ ಮೂಲಕ ಪ್ರಧಾನಿ ಮೋದಿಯವರಿಂದ ಪ್ರಶಂಸೆ ಪಡೆದ ಚಳ್ಳಕೆರೆಯ ಬಿ.ಸಿ.ಪಂಕಜ ಅವರು ಬಡವರು ಸ್ವಾಭಿಮಾನದ ಬದುಕು ಬಾಳಬಹುದು ಅಂತ ತೋರಿಸಿ ಪ್ರೇರಣೆಯಾಗಿದ್ದಾರೆ. 2022ರ ವೇಳೆಗೆ ದೇಶದಲ್ಲಿ 2 ಕೋಟಿ ಮನೆಗಳನ್ನು ಕೇಂದ್ರ ಸರ್ಕಾರ ನಿರ್ಮಿಸಲಿದೆ ಎಂದರು.
 ಭಾರತದಲ್ಲಿ ರಾಮಮಂದಿರ ಭಾರತದ ಕಥೆ ಹೇಳಲಿದೆ. ಅಂತಹ ರಾಮ ಮಂದಿರದ ಇತಿಹಾಸದಲ್ಲಿ ಚಿತ್ರದುರ್ಗ ಹೆಸರು ಅಮರವಾಗಲಿದೆ. ಇದಕ್ಕೆ ಕಾರಣ ರಾಮ ಮಂದಿರ ನಿರ್ಮಾಣದ ತಾಂತ್ರಿಕ ತಂಡದಲ್ಲಿ ಸ್ಥಾನ ಪಡೆದಿರುವ ಜಿಲ್ಲೆಯ ಗುವಾಟಿಯ ಐಐಟಿಯ ನಿರ್ದೇಶಕ ಪ್ರೊ.ಟಿ.ಜಿ.ಸೀತಾರಾಮ್ ಅವರು ಜಿಲ್ಲೆಯ ಕೀರ್ತಿ ಮತ್ತು ಯುವಕರಿಗೆ ಪ್ರೇರಣೆಯಾಗಿದ್ದಾರೆ. ನಮ್ಮ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಡಿಆರ್‍ಡಿಒ, ಬಾರ್ಕ್ ಹಾಗೂ ಇಸ್ರೋ ಕೇಂದ್ರಗಳ ನಂತರ ಜಿಲ್ಲೆಯಲ್ಲಿ ಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭವಾಗಲಿದೆ. ಇದು ಈ ಭಾಗದ ಯುವಕರಿಗೆ ಸ್ಫೂರ್ತಿ ತುಂಬಲಿದೆ. ಜೆನೆರಿಕ್ ಆಧಾರ್ ಅನ್ನೋ ಫಾರ್ಮ್ ಸ್ಟಾರ್ಟ್‍ಆಫ್ ರಾಜ್ಯದ ತನ್ನ ಮೊದಲ ಅಗ್ಗದ ದರ ಔಷಧಿ ಮಳಿಗೆಯನ್ನು ಈಚೆಗೆ ಜಿಲ್ಲೆಯಲ್ಲಿ ಆರಂಭಿಸಿದೆ. ದೇದ ಎಲ್ಲರಿಗೂ ಉತ್ತಮ ಆರೋಗ್ಯ ಗುರಿ ಇರುವ ಈ ಸಂಸ್ಥೆ ಮೂಲಕ ದೇಶದ ಶ್ರೇಷ್ಟ ಉದ್ಯಮಿ ರತನ್ ಟಾಟಾ ಅವರ ಹಾಗೂ ಚಿತ್ರದುರ್ಗ ಸಂಬಂಧ ಶುರುವಾಗಿದೆ. ಬಡವರಿಗೆ ತುಂಬಾ ಕಡಿಮೆ ದರದಲ್ಲಿ ಔಷಧ ಕೊಡುವುದು ಇದರ ಉದ್ದೇಶವಾಗಿದೆ. ಇದು ರಾಜ್ಯದಲ್ಲಿ ಮೊದಲಿಗೆ ನಮ್ಮ ಜಿಲ್ಲೆಗೆ ಕಾಲಿಟ್ಟಿರುವುದು ಹೆಮ್ಮೆ ವಿಷಯವಾಗಿದೆ ಎಂದರು.
 ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗಳ ಕೆರೆ ತುಂಬಿಸುವುದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ತುಂಗಾಭದ್ರ ಜಲಾಶಯದ ಹಿನ್ನೀರಿನಿಂದ ತುರುವನೂರು ಹೋಬಳಿ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಗ್ರಾಮಗಳಿಗೆ ನೀರು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.