
ಬಳ್ಳಾರಿ,ಸೆ.16: ಭಾರತ ಸಂವಿಧಾನದ ತತ್ವ ಮತ್ತು ಆಶೋತ್ತರಗಳನ್ನು ಯುವಕರು, ನಾಗರೀಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ ನೀಡಿದರು.
ಅವರು ನಗರದಲ್ಲಿ ಏರ್ಪಡಿಸಿದ್ದ ಭಾರತದ ಸಂವಿಧಾನ ಪ್ರಸ್ತಾವನೆಯ ವಾಚನ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯ ಬೋಧನೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿನ ನಮ್ಮ ಸಂವಿಧಾನದ ಮಹತ್ವನ್ನು ಯಾರೂ ಮರೆಯಬಾರದು. ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಪಾಲಿಸಬೇಕು ಎಂದರು.
ಕಾರ್ಯಕಮದಲ್ಲಿ ವಿಧಾನಸೌಧ ಮುಂಭಾಗ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ‘ಸಂವಿಧಾನ ಪ್ರಸ್ತಾವನೆ ಓದು’ ಕಾರ್ಯಕ್ರಮದ ನೇರ ಪ್ರಸಾರ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಬಕಾರಿ ಅಧೀಕ್ಷಕ ಎನ್.ಮಂಜುನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್.ಕೆ.ಹೆಚ್ ಸೇರಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಸಂವಿಧಾನವನ್ನು ‘ಸುಪ್ರೀಂ ಆಫ್ ಲ್ಯಾಂಡ್’ ಎಂದೇ ಹೇಳಲಾಗುತ್ತದೆ. ಯಾವುದೇ ಕಾಯ್ದೆಗಳಾಗಲೀ, ಕಾನೂನುಗಳಾಗಲೀ ಅವುಗಳ ಜಾರಿ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸಂವಿಧಾನದ ತತ್ವಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.