ಸಂವಿಧಾನದ ಆಶಯದಂತೆ ನಡೆದುಕೊಳ್ಳೋಣ ಮಹಾದೇವ ಮುರಗಿ ಕರೆ

ವಿಜಯಪುರ ನ.27: ಸಂವಿಧಾನದ ಪ್ರಸ್ತಾವನೆಯ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು, ಸಂವಿಧಾನಕ್ಕನುಗುಣವಾಗಿ ಕಾರ್ಯನಿರ್ವಹಿಸಬೇಕು ಹಾಗೂ ನಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಅಧಿಕಾರಿ,ಸಿಬ್ಬಂದಿಗೆ ಬೋಧಿಸಿ, ಮಾತನಾಡಿದ ಅವರು,ಎಲ್ಲರಿಗೂ ರಕ್ಷಣೆ ಒದಗಿಸುತ್ತದೆ. ಸಂವಿಧಾನವು ದೇಶದ ಬಹು ದೊಡ್ಡ ಶಕ್ತಿಯಾಗಿದೆ. ಅದು,ಜನರನ್ನು ಸಶಕ್ತಗೊಳಿಸಿದೆ ಎಂದರು.ಡಾ. ಬಿ.ಆರ್ ಅಂಬೇಡ್ಕರ ಅವರು ದೇಶಕ್ಕೆ ಬಹು ದೊಡ್ಡ ಸಂವಿಧಾನ ನೀಡಿದ್ದು, ಶ್ರಮಿಸಿದವರನ್ನು ನೆನಪು ಮಾಡಿಕೊಳ್ಳೋಣ, ದೇಶದ ಸಂವಿಧಾನ ನಮ್ಮ ಹೆಮ್ಮೆ ಎಂದರು. ಸಂವಿಧಾನದ ಅಂಶಗಳನ್ನು ಪಾಲನೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿಮಹಾದೇವ ಮುರಗಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೂ ಮುಂಚೆ ನಗರದ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸಣ್ಣೆಪ್ಪ ಕಲಶೆಟ್ಟಿ,ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಿಕಿ,ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಹೊಸಮನಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು ಮುಜುಂದಾರ, ಜಿಲ್ಲ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರು.