ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರು

ಸಂಜೆವಾಣಿ ವಾರ್ತೆ

ದಾವಣಗೆರೆ, ಫೆ.೨೭;- ಸಂವಿಧಾನದ ಪ್ರಮುಖ ಅಂಗವಾದ ನ್ಯಾಯಾಂಗವು ಕಳೆದ 75 ವರ್ಷಗಳಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡು ಬರುವಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯಪಟ್ಟರು.ಅವರು ಇಂದು ಜಿಲ್ಲಾ ವಕೀಲರ ಸಾಂಸ್ಕೃತಿಕ ಸಭಾ ಭವನದಲ್ಲಿ ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಪ್ರಧಾನ ಸಿವಿಲ್ ಜಡ್ಜ್ ಹೆಚ್.ಡಿ. ಗಾಯತ್ರಿ ಯವರಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ದೇಶವು ಗಣರಾಜ್ಯದ ಅಮೃತಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮತ್ತು ಗಣತಂತ್ರ ವ್ಯವಸ್ಥೆಗೆ ನ್ಯಾಯಾಂಗದ ಪಾತ್ರ ಬಹಳ ಮುಖ್ಯವಾಗಿದ್ದು, ನ್ಯಾಯಾಧೀಶರು ಮತ್ತು ವಕೀಲರು ನ್ಯಾಯಾಂಗ ರಥದ ಎರಡು ಚಕ್ರಗಳಾಗಿದ್ದು, ರಥವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ವಿವಾದಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಮೂಲಕ ನ್ಯಾಯಾಂಗದ ಘನತೆಯನ್ನು ಕಾಪಾಡಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.ನೂತನವಾಗಿ ವರ್ಗಾವಣೆಗೊಂಡು ಬಂದಿರುವ ನ್ಯಾಯಾಧೀಶರಾದ ಹೆಚ್.ಡಿ. ಗಾಯಿತ್ರಿಯವರು ಮಾತನಾಡಿ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದ ಅವರು ಪ್ರಕರಣಗಳ ವಿಲೇವಾರಿಯಲ್ಲಿ ಹಿರಿಯ ವಕೀಲರು, ಹಿರಿಯ ನ್ಯಾಯಾಧೀಶರ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇವೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್‌ರವರು ಮಾತನಾಡಿ, ಜಿಲ್ಲಾ ವಕೀಲರ ಸಂಘವು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ, ಪ್ರಕರಣಗಳ ವಿಲೇವಾರಿಯಲ್ಲಿ ನ್ಯಾಯಾಧೀಶರಿಗೆ ಗೌರವ ಕೊಡುವ ಮೂಲಕ ಅತೀ ಹೆಚ್ಚಿನ ಸಹಕಾರವನ್ನು ನೀಡುತ್ತಾ ಬಂದಿದೆ. ಲೋಕ ಅದಾಲತ್‌ನಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಹೈಕೋರ್ಟ್ನ ಪ್ರಶಂಸನಾ ಪತ್ರಕ್ಕೆ ಸಂಘವು ಭಾಜನವಾಗಿದೆ ಎಂದು ತಿಳಿಸಿದರು.