ಸಂವಿಧಾನದ ಆಶಯದಂತೆ ಕಾರ್ಮಿಕ ಮಹಿಳೆಯರಿಗಾಗಿಯೂ ಅನೇಕ ಕಾನೂನುಗಳ ಜಾರಿ:ವೆಂಕಣ್ಣ ಹೊಸಮನಿ

ವಿಜಯಪುರ, ನ.13-ಮಹಿಳೆಯರಿಗಾಗಿ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದ್ದು, ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಬೇಕು ಎಂಬ ಸಂವಿಧಾನದ ಆಶಯದಂತೆ ಕಾರ್ಮಿಕ ಮಹಿಳೆಯರಿಗಾಗಿಯೂ ಅನೇಕ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರು ಹೇಳಿದರು.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಅನೌಪಚಾರಿಕ ಶಿಕ್ಷಣ ಸಂಸ್ಥೆಯಲ್ಲಿ ಬುಧುವಾರ ದಿನಾಂಕ: 10.11.2021 ರಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಬಲೀಕರಣ ಮತ್ತು ಮಹಿಳಾ ಕಾನೂನುಗಳ ಬಗ್ಗೆ ಕಾನೂನು ಅರಿವು-ನೆರವು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಜಿ, ಖೈನೂರ ಅವರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಇರುವ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ವಕೀಲರುಗಳಾದ ಶ್ರೀಮತಿ ಎಸ್, ಆರ್, ಓಂಕಾರ, ಶ್ರೀಮತಿ ಬಿ.ಎಮ್, ಆಲಗೊಂಡ ಅವರು ಮಹಿಳೆಯರಿಗಾಗಿ ಇರುವ ಅನೇಕ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ ಟಿಯೋಲ್ ಮಚಾದೊ ಅವರು ವಹಿಸಿದ್ದರು. ಫಾದರ್ ಜೀವನ ಜೇಮ್ಸ್, ಶ್ರೀಮತಿ ಜಗದೇವಿ ಸಜ್ಜನ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು ನೂರಾ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು,