ಸಂವಿಧಾನದ ಆಶಯಗಳನ್ನು ಅನುಸರಿಸಿ: ಡಾ.ನಿಷ್ಠಿ

ಕಲಬುರಗಿ,ಜ.27-ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಅನುಸರಿಸಬೇಕು ಎಂದು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಐಕ್ಯೂಎಸಿ ಅಧಿಕಾರಿ ಡಾ.ಸಂಗಣ್ಣ ನಿಷ್ಠಿ ಕರೆ ನೀಡಿದರು.
ಫರಹತಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾತ, ರಾಷ್ಟ್ರೀಯ ಮತದಾನ ದಿನ, ಏಡ್ಸ್ ಕುರಿತು ಜಾಗೃತಿ ಅಭಿಯಾನ, ಗಾಂಧೀಜಿಯವರ ತತ್ವ ಚಿಂತನೆಗಳ ಅರಿವು, ಐಕ್ಯೂಎಸಿ ಅಡಿಯಲ್ಲಿ ವಿಶೇಷ ಉಪನ್ಯಾಸ ಮತ್ತು ಎಫ್ ಡಿ ಪಿ ಕುರಿತು ಒಂದು ದಿನದ ಕಾರ್ಯಗಾರ ಹೀಗೆ ವಿವಿಧ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹಾಗೂ ಎಲ್ಲ ವರ್ಗದವರಿಗೂ ಸ್ವಾತಂತ್ರ್ಯ ಸಮಾನತೆ ಭಾತೃತ್ವ ಪರಿಕಲ್ಪನೆಯನ್ನು ನೀಡಿದೆ ಎಂದರು. ಎಲ್ಲ ಸಮಾಜ ಸುಧಾರಕರ ಚಿಂತನೆಗಳನ್ನು ಅಳವಡಿಸಿಕೊಂಡು ತಮ್ಮ ಭಾವಿ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೇಡಂ ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರದ ಸಹಪ್ರಾಧ್ಯಾಪಕರದ ಡಾ.ಶಕೀರಾ ಅವರು ಮಾತನಾಡುತ್ತ ವಿದ್ಯಾರ್ಥಿಗಳು ದಿನನಿತ್ಯ ಕಾಲೇಜಿಗೆ ಬಂದು ಶಿಕ್ಷಕರು ಹೇಳುವ ಪಾಠ ಪ್ರವಚನಗಳನ್ನು ಅಧ್ಯಯನ ಮಾಡಿದರೆ ಖಂಡಿತ ಭವಿಷ್ಯವನ್ನು ಉತ್ತಮ ರೀತಿಯಿಂದ ರೂಪಿಸಿಕೊಳ್ಳಲು ಸಾಧ್ಯವಾಗುತ್ತೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಇಂದುಮತಿ ಪಾಟೀಲ್ ಅವರು ಮಾತನಾಡುತ್ತ ಸರ್ಕಾರದಿಂದ ಕಾಲೇಜಿಗೆ ಅನುದಾನ ಬರುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬಳಕೆಯಾಗಬೇಕಾಗಿದ್ದರೆ ತಾವುಗಳು ಪ್ರತಿ ದಿನ ಕಾಲೇಜಿಗೆ ಬಂದು ಅಧ್ಯಯನ ಮಾಡಿದರೆ ಅದು ಸಾರ್ಥಕವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಡಾ. ಶಶಿಕಾಂತ್ ಪಾಟೀಲ್ ಡಾ.ಭೀಮಣ್ಣ ಎಚ್.ಉಪಸ್ಥಿತರಿದ್ದರು.ಡಾ.ಗಾಂಧೀಜಿ ಮೋಳಕೆರೆ ನಿರೂಪಿಸಿದರು. ಡಾ.ರವೀಂದ್ರಕುಮಾರಿ ಭಂಡಾರಿ ಸ್ವಾಗತಿಸಿ ವಂದಿಸಿದರು.