ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಇರಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೩೦: ದಾರಿ ಯಾವುದೇ ರೀತಿ ಇರಲಿ ಅದನ್ನು ಸರಿ ಮಾಡುವ ಬುದ್ದಿವಂತಿಕೆಯನ್ನು ಬೆಳೆಸಿಕೊಂಡು ಸಮಾಜ ಪರಿವರ್ತನೆ, ಬದಲಾವಣೆ ಮಾಡುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಸಮಾಜ ನಮಗೇನು ಮಾಡಿದೆ ಎಂದು ಸುಮ್ಮನಾಗದೇ ಸಮಾಜಕ್ಕೆ ನಾವೇನಾದರೂ ಕೊಡುಗೆ ನೀಡಬೇಕು. ಆ ಮೂಲಕ ಸಾಮಾಜಿಕ ಪರಿವರ್ತನ ಮಾಡಬೇಕಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜಾಧ್ಯಕ್ಷ ಬಿ.ಗೋಪಾಲ್ ಕರೆ ನೀಡಿದರು.ಪ್ರಜಾ ಪರಿವರ್ತನಾ ವೇದಿಕೆ, ಕರ್ನಾಟಕ, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಾಗೂ ಜೋಗೇಂದ್ರ ಸಿಂಗ್ ಮಂಡಲ್‌ರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮನುಷ್ಯರಾದ ನಮಗೆ ಯಾವುದನ್ನು ಕಡಿಸಿದರೆ ಮತ್ತೆ ಸರಿ ಮಾಡಲು ಬರುವುದಿಲ್ಲವೋ ಅದನ್ನು ಕಡಿಸಬಾರದು. ಒಂದು ವೇಳೆ ನಮಗೆ ಯಾವುದೋ ಒಂದು ಮರದ ಟೊಂಗೆಯನ್ನು ಕತ್ತರಿಸಿದರೆ ಅದನ್ನು ಮತ್ತೆ ಅದೇ ಜಾಗಕ್ಕೆ ಸೇರಿಸುವ ಶಕ್ತಿ ಇರಬೇಕು. ಇಲ್ಲವಾದಲ್ಲಿ ಅದನ್ನು ಮಾಡಬಾರದು. ಭಗವಾನ್ ಬುದ್ದ ಕೂಡ ಅಂಗುಲಿಮಾಲನನ್ನು ಪರಿವರ್ತನೆಯನ್ನು ಇದೇ ರೀತಿ ಮಾಡಿದರು ಎಂದು ಹೇಳಿದರು.ಭಾರತ ದೇಶದಲ್ಲಿ ಅಂಬೇಡ್ಕರ್ ಸಂವಿಧಾನವನ್ನು ತಿಪ್ಪೆಗೆ ಎಸೆಯಲು ಲಾಯಕ್ಕು, ಅವರು ಬರೆದೇ ಇಲ್ಲ ಎಂದು ನಮ್ಮ ರಾಜ್ಯದಲ್ಲಿ ವೇದಿಕೆಯಲ್ಲಿ ಭಾಷಣ ಮಾಡಿದವರೂ ಇದ್ದಾರೆ. ಅಂಬೇಡ್ಕರ್ ಸಂವಿಧಾನ ಇರದೇ ಇದ್ದರೆ ಏನೂ ಸಾಧ್ಯತೆ ಇಲ್ಲ ಎಂದು ಹೇಳಿದವರೂ ಇದ್ದಾರೆ. ಒಂದು ವೇಳೆ ಅಂಬೇಡ್ಕರ್ ಸಂವಿಧಾನ ಬರೆಯದೇ ಇದ್ದರೆ ನಾವೆಲ್ಲರೂ ಈ ರೀತಿ ಒಟ್ಟಾಗಿ ಸೇರಲು ಸಾಧ್ಯ ಆಗುತ್ತಿರಲಿಲ್ಲ ಎಂದರು.ಆ ನಿಟ್ಟಿನಲ್ಲಿ ಸಂವಿಧಾನ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಂಡು, ಮನೆಮನೆಗೆ ತಿಳಿಸುವ ಕೆಲಸವನ್ನು ಪ್ರಜಾ ಪರಿವರ್ತನಾ ಸಂಘಟನೆ ಮಾಡಬೇಕಿದೆ. ಆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿನ ಸಾಮಾನ್ಯ ಜನ ಕೂಡ ಸಂವಿಧಾನದ ಬಗ್ಗೆ ಮಾತನಾಡವಂತೆ ಆಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಹೆಚ್.ಕೆ.ಕೃಷ್ಣ ಅರಕೆರೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಡಾ.ಸಯ್ಯದ್ ರೋಷನ್ ಮುಲ್ಲಾ ಸಂವಿಧಾನ ಕುರಿತು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಎಸ್‌ಪಿ ಎನ್.ರುದ್ರಮುನಿ, ಎನ್.ಕಾಂಚನಾ, ಕೆ.ಓ.ಮಂಜಪ್ಪ ಇತರರು ಇದ್ದರು.