ಸಂವಿಧಾನದಿಂದ ಸಮಾನತೆ ನ್ಯಾಯ, ಸ್ವಾತಂತ್ರ್ಯ

ವಿಜಯಪುರ.ಜ೩೧;ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ನೀಡಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಸಂವಿಧಾನ ದೇಶದ ಪ್ರಜೆಗಳ ಸಮಾನತೆಯ ಅಡಿಪಾಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ತಿಳಿಸಿದರು.
ಮಂಗಳವಾರದಂದು ಇವರು ಪಟ್ಟಣದ ಪುರಸಭಾ ಮುಂಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪುರಸಭಾವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಎಲ್ಲಾ ಹೋಬಳಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮೇಲಧಿಕಾರಿಗಳ ಆದೇಶದಂತೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ಪಂಚಾಯಿತಿ ಮಟ್ಟದಿಂದ ನಗರ ಸಭೆಯದವರಿಗೆ ನಡೆಸಿಕೊಂಡು ಬಂದಿದ್ದು ಫೆಬ್ರವರಿಯಲ್ಲಿ ಕಾರ್ಯಕ್ರಮವನ್ನು ಎಲ್ಲಾ ಕಡೆ ನಡೆಸಲಾಗುವುದು ಎಂದರು.
ಸಮಾನ ಮೂಲಭೂತ ಹಕ್ಕುಗಳು: ದೇಶದ ಪ್ರತಿಯೊಬ್ಬರಿಗೂ ಸಮಾನ ಮೂಲಭೂತ ಹಕ್ಕುಗಳಿದೆ. ಪ್ರತಿಯೊಬ್ಬರೂ ಸಂವಿಧಾನದ ಪ್ರಸ್ತಾವನೆ ಹಾಗೂ ಮೂಲಭೂತ ಹಕ್ಕುಗಳನ್ನು ಪ್ರತಿನಿತ್ಯ ಒಮ್ಮೆ ಅವಲೋಕಿಸಿದರೆ ಕಾನೂನಿನಡಿ ಸಿಗುವ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆದುಕೊಳ್ಳಬಹುದು.ಮೂಲಭೂತ ಕರ್ತವ್ಯಗಳನ್ನು ಸಹ ಕಡ್ಡಾಯವಾಗಿ ಪಾಲಿಸಿದರೆ ದೇಶದ ಸಂವಿಧಾನ ಪರಿಕಲ್ಪನೆಯನ್ನು ಸಶಕ್ತಗೊಳಿಸಬಹುದು. ಭಾರತದ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ವಿಮಲ ಬಸವರಾಜ್ ಮಾತನಾಡಿ, ಸ್ವಾತಂತ್ರ್ಯದ ದುರುಪಯೋಗವನ್ನು ಹಾಗೂ ಅಧಿಕಾರದ ಹಸ್ತಕ್ಷೇಪವನ್ನು ತಡೆಗಟ್ಟುವ ಅನೇಕ ಕಟ್ಟುಪಾಡುಗಳು ಮತ್ತು ನಿಬಂಧಗಳು ನಮ್ಮ ಸಂವಿಧಾನದಲ್ಲೇ ಅಂತರ್ಗತವಾಗಿವೆ. ಆದ್ದರಿಂದ ಈ ಎಲ್ಲ ಸ್ವಾತಂತ್ರ್ಯಗಳು, ನಿಬಂಧಗಳು ಮತ್ತು ಕರ್ತವ್ಯಗಳು ಪ್ರತಿಯೊಬ್ಬ ನಾಗರಿಕನ ಹಕ್ಕುಗಳೂ ಹೌದು ಬಾಧ್ಯತೆಗಳೂ ಹೌದು ಎಂದರು.
ಈ ಕಾರ್ಯಕ್ರಮವು ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ, ಮಂಡಿಬೆಲೆ ಗ್ರಾಮ ಪಂಚಾಯಿತಿ, ಎಲಿಯೂರು ಗ್ರಾಮ ಪಂಚಾಯಿತಿ, ಐಬಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಜಾಥ ನಡೆಸಲಾಯಿತು.
ಈ ಕಾರ್ಯಕ್ರಮವು ಪುರಭೆಯ ಆವರಣದಲ್ಲಿ ಡೋಳ್ಳು ಕುಣಿತ ಹಾಗೂ ಪೂಜಾ ಕುಣಿತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ಸತೀಶ್, ನೂಡಲ್ ಅಧಿಕಾರಿ ಪ್ರಭಾಕರ್, ಶ್ರೀನಿವಾಸ್ ಗಾಂಧಿ, ಪುರಸಭಾ ಅಧಿಕಾರಿಗಳಾದ ಕಂದಾಯ ನೀರಿಕ್ಷಕ ತ್ಯಾಗರಾಜ್, ಶಿವನಾಗೇಗೌಡ, ಅನೀಲ್, ಪವನ್ ಜೋಷಿ, ಆರೋಗ್ಯ ಅಧಿಕಾರಿ ಲಾವಣ್ಯ, ರವಿ, ಹಜ್ಮತ್, ಮಂಜು, ಜನಾರ್ಧನ್, ಪುರಸಭಾ ಸದಸ್ಯರಾದ ಹನೀಪುವುಲ್ಲ, ನಾರಾಯಣಸ್ವಾಮಿ, ರಾಜಣ್ಣ ಮುಖಂಡರಾದ ಬಸವರಾಜ್, ಜೆ.ಎನ್.ಶ್ರೀನಿವಾಸ್ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.