ಸಂವಿಧಾನದಿಂದ ದೇಶ ಸದೃಢ

ಬೀದರ್:ಸೆ.14: ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಅಂಬ್ರೆಪ್ಪ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ವತಿಯಿಂದ ನಗರದ ಸಿದ್ಧಾರ್ಥ ಪದವಿ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಂವಿಧಾನವು ಸರ್ವರಿಗೂ ಸಮಾನ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಅವರು ಬಹಳ ಕಷ್ಟಪಟ್ಟು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಸಾಹಿತಿ ಎಸ್.ಬಿ. ಕುಚಬಾಳ್ ಮಾತನಾಡಿ, ಇಂದಿನ ಯುವ ಪೀಳಿಗೆ ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಯನ್ನು ಅರಿಯಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ವಿದ್ಯಾರ್ಥಿಗಳು, ಯುವಜನರಿಗೆ ಡಾ. ಅಂಬೇಡ್ಕರ್ ಅವರ ಜೀವನವನ್ನು ಪರಿಚಯಿಸಲು ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಐದು ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಡಾ. ಅಂಬೇಡ್ಕರ್ ಅವರು ಬಹಳಷ್ಟು ಪದವಿಗಳನ್ನು ಪಡೆದುಕೊಂಡಿದ್ದರು. ನಿತ್ಯ ಸುದೀರ್ಘ ಅವಧಿಗೆ ಅಧ್ಯಯನ ಮಾಡುತ್ತಿದ್ದರು. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶ ಪಾಲಿಸಬೇಕು. ಈ ಮೂಲಕ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಪ್ರೊ. ಗೋಪಾಲ್ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿ ಹಾಗೂ ತಂಡದವರು ನಾಡಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿದರು. ರಾಜಕುಮಾರ ಶಿಂಧೆ ನಿರೂಪಿಸಿದರು.

ಡಾ. ಅಂಬೇಡ್ಕರ್ ಅವರ ಬದುಕು-ಬರಹ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ರೂ. 8 ಸಾವಿರ ಮೌಲ್ಯದ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.