ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶ: ಗ್ರಾ.ಪಂ ಅಧ್ಯಕ್ಷರಾದ ರೇಖಾ ಅಭಿಮತ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ. 06:- ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳನ್ನು ನೀಡುವ ಜೊತೆಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಮತ್ತು ಸಹಬಾಳ್ವೆಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಖಾ ಅವರು ಹೇಳಿದರು.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿಯಲ್ಲಿ ಇಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನ ಜಾರಿಗೆ ಬಂದು 75 ವಷರ್Àಗಳು ಪೂರೈಸುತ್ತಿರುವ ಸವಿ ನೆನಪಿಗಾಗಿ ನಮ್ಮ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾ ಬಂದಿರುವುದು ಬಹಳ ಸಂತೋಷ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದಾರೆ ಎಂದರೆ ಅದು ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಹೀಗಾಗಿ ಸಂವಿಧಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿ ಬರಬೇಕು ಎಂದರು.
ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ನೀಡುವುದರ ಜೊತೆಗೆ ಅಭಿವ್ಯಕ್ತಿ, ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಸಮಾನ ಅವಕಾಶಗಳನ್ನು ನೀಡುವುದು ಸಂವಿಧಾನದ ಮೂಲ ಆಶಯ ವಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಖಾ ಅವರು ಹೇಳಿದರು.
ಇದೇ ಸಂಧರ್ಭದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮದ ಎಲ್ಲಾ ಜನರು, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅದ್ದೂರಿಯಾಗಿ ಬರಮಾಡಿಕೊಂಡರು.
ಸಂವಿಧಾನ ಜಾಗೃತಿ ಜಾಥಾ ನೋಡಲ್ ಅಧಿಕಾರಿ ನವೀನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.