ಸಂವಿಧಾನಕ್ಕೆ ಸಂಪೂರ್ಣ ಬದ್ಧರಾಗಿ ಅಧಿಕಾರಿಗಳಿಗೆ ಸಿಎಂ ತಾಕೀತು

(ಸಂಜೆವಾಣಿ ಪ್ರತಿನಿಧಿಯಿಂದ)
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ಜ ೩೧: ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಸಂಪೂರ್ಣ ಬದ್ಧರಾಗಿರಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳಿಗೆ ಸೇವೆಯಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.ಕರ್ತವ್ಯಲೋಪ ನಿರ್ಲಕ್ಷ್ಯಕ್ಕೆ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಶಿಸ್ತು ಕಾಪಾಡಬೇಕೆಂದು ಅವರು ತಾಕೀತು ಮಾಡಿದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮೊಟ್ಟ ಮೊದಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದು ತಿಳಿಸಿದರು.ಸರ್ಕಾರ ಅಧಿಕಾರಕ್ಕೆ ಬಂದು ೮ ತಿಂಗಳಾಗಿವೆ.ಉಸ್ತುವಾರಿ ವಹಿಸಿಕೊಂಡ ನಂತರ ಆಡಳಿತಾತ್ಮಕ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿರುವ ಬಗ್ಗೆಯೂಮಾಹಿತಿ ನೀಡುವಂತೆಯೂ ತಾಕೀತು ನೀಡಿದರು.ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಎಷ್ಟರಮಟ್ಟಿಗೆ ಬಗೆಹರಿಸುತ್ತಿದ್ದೀರಿ.ಕಂದಾಯ ಇಲಾಖೆ ತಹಶೀಲ್ದಾರ್ ಕಚೇರಿಗೆ ನಾಗರಿಕರ ಅಲೆದಾಟ ಕಡಿಮೆಯಾಗಿದೆಯೆ? ಸಮಸ್ಯೆಗಳು ಯಾವ ರೀತಿ ಬಗೆಹರಿಸಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದರು.ಇತ್ತೀಚೆಗೆ ಜನಸ್ಪಂದನದಲ್ಲಿ ಬಂದ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೆ. ಆದರೆ, ಜನರ ಸಮಸ್ಯೆಗಳಿಗೆ ಇನ್ನಷ್ಟು ತ್ವರಿತವಾಗಿ ಸ್ಪಂದಿಸಬೇಕು. ಎಷ್ಟು ಕಚೇರಿಗಳಿಗೆ, ಹಾಸ್ಟೆಲ್‌ಗಳಿಗೆ,ಠಾಣೆಗಳಿಗೆ ಅಧಿಕಾರಿಗಳು ಭೇಟಿ ನೀಡಿರುವ ಬಗ್ಗೆಯೂ ಸಿದ್ದರಾಮಯ್ಯ ಸಭೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.
ರಾಜ್ಯದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಾ ಎಂದು ಅಧಿಕಾರಿಗಳಿಗೆ ಛಾಟಿ ಬೀಸಿದ ಸಿದ್ದರಾಮಯ್ಯ, ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು.