ಸಂವಾದ ಕಾರ್ಯಕ್ರಮ

ಧಾರವಾಡ, ಮಾ.17: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತ ಅವರು ನಗರದ ವಿವಿಧ ಪ್ರೌಢಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಕಲಿಕೆ, ಪರೀಕ್ಷೆ ಎದುರಿಸುವ ಆತ್ಮ ಸ್ಥೈರ್ಯ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಪ್ರಸಕ್ತ ಸಾಲಿನ ಪಠ್ಯ ಬೋಧನೆ, ಪಠ್ಯ ಪೂರ್ಣಗೊಳಿಸಿರುವುದು, ಪರೀಕ್ಷೆಗೆ ಸಿದ್ದಗೊಳಿಸಿರುವುದು ಮತ್ತು ಮಕ್ಕಳಿಗೆ ನೈತಿಕ ಶಿಕ್ಷಣ ಪಾಠ ಮಾಡಿರುವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ನ್ಯಾಯಾಧೀಶರು ತಿಳಿದುಕೊಂಡರು.
ಪರೀಕ್ಷೆಯನ್ನು ಎದುರಿಸುವ ಕುರಿತು ಮಕ್ಕಳಿಗೆ ತಿಳಿಸುವ ಮೂಲಕ, ಮಕ್ಕಳಿಗೆ ಶಾಲಾವರ್ಗದ ಪರೀಕ್ಷೆಗಳಿಗಿಂತ ಜೀವನದ ಪರೀಕ್ಷೆ ದೊಡ್ಡದು, ಅದನ್ನು ಎದುರಿಸಿ, ಜಯಿಸುವ ಶಕ್ತಿ, ಯುಕ್ತಿ, ಧೈರ್ಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.