ಬೀಜಿಂಗ್, ಜೂ.೧೯- ಹದಗೆಟ್ಟಿರುವ ಚೀನಾ ಹಾಗೂ ಅಮೆರಿಕಾ ಇದೀಗ ತಮ್ಮ ಸಂಬಂಧಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡುವ ಇರಾದೆಯಲ್ಲಿದೆ. ಸದ್ಯ ಎರಡು ದಿನಗಳ ಚೀನಾ ಪ್ರವಾಸದಲ್ಲಿರುವ ಅಮೆರಿಕಾ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ಅವರು ಚೀನಾದ ವಿದೇಶಾಂಗ ಸಚಿವರ ಜೊತೆ ಸಮಗ್ರ ಚರ್ಚೆ ನಡೆಸಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿರುವ ಬ್ಲಿಂಕೆನ್, ಸಂಬಂಧದಲ್ಲಿ ರಾಜತಾಂತ್ರಿಕತೆಯ ಹೆಚ್ಚಿನ ಅಗತ್ಯವಿದೆ. ಅಲ್ಲದೆ ಸಂವಹನದ ಮಾರ್ಗಗಳನ್ನು ಮುಕ್ತವಾಗಿ ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಅಮೆರಿಕಾ ಜೊತೆ ಜೊತೆ ಸ್ಥಿರ, ಊಹಿಸಬಹುದಾದ ಮತ್ತು ರಚನಾತ್ಮಕ ಸಂಬಂಧವನ್ನು ನಿರ್ಮಿಸಲು ಚೀನಾ ಬದ್ಧವಾಗಿದೆ. ಚೀನಾ-ಯುಎಸ್ ಸಂಬಂಧಗಳಿಗೆ ತೈವಾನ್ ವಿಚಾರವು “ಅತ್ಯಂತ ಪ್ರಮುಖ ಅಪಾಯವಾಗಿದೆ. ತೈವಾನ್ ಸಮಸ್ಯೆಯು ಚೀನಾದ ಪ್ರಮುಖ ಹಿತಾಸಕ್ತಿಗಳಲ್ಲಿ ಒಂದಾಗಿದೆ ಎಂದು ಅತ್ತ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದೆಡೆ ದಕ್ಷಿಣ ಚೀನಾ ಸಾಗರ ಹಾಗೂ ಇಂಡೋ-ಪೆಸಿಫಿಕ್ ಸಾಗರದಲ್ಲಿ ನೆರೆ ರಾಷ್ಟ್ರಗಳಲ್ಲಿ ಆತಂಕ ಮೂಡಿಸುತ್ತಿರುವ ಚೀನಾ ವಿರುದ್ಧ ಇದೀಗ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳು ತೊಡೆತಟ್ಟಿವೆ. ಅತ್ತ ಬ್ಲಿಂಕೆನ್ ಚೀನಾ ಪ್ರವಾಸ ಮಾಡಿದ್ದರೂ ಎರಡೂ ದೇಶಗಳ ಸಂಬಂಧದಲ್ಲಿ ಯಾವುದೇ ರೀತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅದೂ ಅಲ್ಲದೆ ಮುಂದಿನ ದಿನಗಳಲ್ಲಿ ತೈವಾನ್ ವಿಚಾರದಲ್ಲಿ ಅಮೆರಿಕಾ ಹಾಗೂ ಚೀನಾ ನಡುವೆ ಮತ್ತೊಮ್ಮೆ ಮುಸುಕಿನ ಗುದ್ದಾಟ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಜಾಗತಿಕ ವಿಶ್ಲೇಷಕರು ವಿಚಾರ ವ್ಯಕ್ತಪಡಿಸಿದ್ದಾರೆ. ಇನ್ನು ಚೀನಾ ಭೇಟಿಯ ಮೂಲಕ ಬ್ಲಿಂಕೆನ್ ಅವರು ಕಳೆದ ಐದು ವರ್ಷಗಳಲ್ಲಿ ಚೀನಾಗೆ ಭೇಟಿ ನೀಡಿದ ಅಮೆರಿಕಾದ ಮೊದಲ ವಿದೇಶಾಂಗ ಸಚಿವರಾಗಿದ್ದಾರೆ. ಐದು ತಿಂಗಳ ಹಿಂದೆಯೇ ಬ್ಲಿಂಕೆನ್ ಅವರ ಚೀನಾ ಭೇಟಿಗೆ ಎಲ್ಲಾ ರೀತಿಯಲ್ಲಿ ತಯಾರಿ ನಡೆದಿತ್ತು. ಆದರೆ ಚೀನಾದ ಗೂಢಾಚಾರಿ ಬಲೂನ್ ಅಮೆರಿಕಾದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಎರಡೂ ದೇಶಗಳ ನಡುವಿನ ಹಳಸಿದ ಸಂಬಂಧದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿತ್ತು. ಅದೂ ಅಲ್ಲದೆ ಆ ಅವಧಿಯಲ್ಲಿ ಬ್ಲಿಂಕೆನ್ ತಮ್ಮ ಚೀನಾ ಪ್ರವಾಸ ಸ್ಥಗಿತಗೊಳಿಸಿದ್ದರು.